ಕೊಲಂಬೊ: ಪಂದ್ಯಗಳನ್ನು ಫಿಕ್ಸ್ ಮಾಡಿದ ಆರೋಪ ಎದುರಿಸುತ್ತಿರುವ ಶ್ರೀಲಂಕಾದ ಮಾಜಿ ಅಂತರ್ರಾಷ್ಟ್ರೀಯ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಅವರನ್ನು ಸ್ಥಳೀಯ ನ್ಯಾಯಾಲಯವು ವಿದೇಶಕ್ಕೆ ಪ್ರಯಾಣಿಸದಂತೆ ಸೋಮವಾರ ನಿಷೇಧ ವಿಧಿಸಿದೆ.
ಶ್ರೀಲಂಕಾದ ಪರ 2012 ಹಾಗೂ 2016ರ ನಡುವೆ ಏಕೈಕ ಟೆಸ್ಟ್, 49 ಏಕದಿನ ಹಾಗೂ 24 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿರುವ 38ರ ಹರೆಯದ ಸೇನಾನಾಯಕೆ ವಿರುದ್ಧ 2020ರ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಪಂದ್ಯಗಳನ್ನು ಫಿಕ್ಸ್ ಮಾಡಲು ಯತ್ನಿಸಿದ ಆರೋಪ ಹೊರಿಸಲಾಗಿದೆ. ಸೇನಾನಾಯಕೆ ಟೆಲಿಫೋನ್ ಮೂಲಕ ಪಂದ್ಯಗಳನ್ನು ಫಿಕ್ಸ್ ಮಾಡಲು ಇಬ್ಬರು ಆಟಗಾರರನ್ನು ಸೆಳೆದಿದ್ದರು.
ಕೊಲಂಬೊದ ಮುಖ್ಯಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂರು ತಿಂಗಳ ಅವಧಿಗೆ ಜಾರಿಯಲ್ಲಿರುವ ಸೇನಾನಾಯಕೆ ಮೇಲಿನ ಪ್ರಯಾಣ ನಿಷೇಧ ವಿಧಿಸಲು ವಲಸೆ ನಿಯಂತ್ರಣಾಧಿಕಾರಿಗೆ ಆದೇಶಿಸಿದೆ.