ಲಂಡನ್: ಗಾಯದ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸೋಲೊಪ್ಪಿಕೊಂಡ ಮೂರು ಬಾರಿ ಆ್ಯಶಸ್ ಕಪ್ ವಿಜೇತ ಇಂಗ್ಲೆಂಡ್ ನ ಮಾಜಿ ವೇಗದ ಬೌಲರ್ ಸ್ಟೀವನ್ ಫಿನ್ ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾದರು.
ಫಿನ್ ಅವರು 2010 ಹಾಗೂ 2016ರ ನಡುವೆ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ 36 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟು 125 ವಿಕೆಟ್ಗಳನ್ನು ಕಬಳಿಸಿದ್ದಾರೆ. 34ರ ಹರೆಯದ ಫಿನ್ 69 ಏಕದಿನ ಅಂತರ್ರಾಷ್ಟ್ರೀಯ ಪಂದ್ಯ ಹಾಗೂ 21 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.
ಗಾಯಗಳಿಂದಾಗಿ ತತ್ತರಿಸಿದ್ದ ಫಿನ್ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದರು. 2022ರ ಜುಲೈನಿಂದ ಟೆಸ್ಟ್ ಕ್ರಿಕೆಟನ್ನು ಆಡಿಲ್ಲ.
ನಾನು ಕಳೆದ 12 ತಿಂಗಳುಗಳಿಂದ ನನ್ನ ದೇಹದೊಂದಿಗೆ ಹೋರಾಡುತ್ತಿದ್ದೇನೆ. ಇಂದು ಸೋಲನ್ನು ಒಪ್ಪಿಕೊಂಡಿದ್ದೇನೆ ಎಂದು ಫಿನ್ ಹೇಳಿದ್ದಾರೆ.
ಫಿನ್ 16ರ ವಯಸ್ಸಿನಲ್ಲಿ ಕೌಂಟಿ ಕ್ರಿಕೆಟಿಗೆ ಕಾಲಿಟ್ಟಿದ್ದರು. 2010ರಲ್ಲಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ನಂತರ ಇಂಗ್ಲೆಂಡ್ನ ಸ್ಟಾರ್ ಬೌಲರ್ ಆಗಿ ಗುರುತಿಸಿಕೊಂಡಿದ್ದರು.