ಲಂಡನ್ : ಏಕದಿನ ಕಪ್-2023ರಲ್ಲಿ 244 ರನ್ ಗಳಿಸಿದ ಬೆನ್ನಿಗೆ ಭಾರತದ ಬ್ಯಾಟರ್ ಪೃಥ್ವಿ ಶಾ ಮತ್ತೊಂದು ಶತಕ ದಾಖಲಿಸಿ ಗಮನ ಸೆಳೆದರು. ರವಿವಾರ ಚೆಸ್ಟರ್ಲೀ ಸ್ಟ್ರೀಟ್ನಲ್ಲಿ ಡುಹ್ರಾಮ್ ವಿರುದ್ಧದ ಪಂದ್ಯದಲ್ಲಿ ಶಾ ಈ ಸಾಧನೆ ಮಾಡಿದರು.
ನಾಟಿಂಗ್ಹ್ಯಾಮ್ಶೈರ್ ಓಪನರ್ ಶಾ ಅವರು 68 ಎಸೆತಗಳಲ್ಲಿ ಶತಕ ಪೂರೈಸಿದರು. ಸತತ 3 ಎಸೆತಗಳಲ್ಲಿ ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಸಿಡಿಸಿದ ಶಾ ಪಂದ್ಯವನ್ನು ತನ್ನದೇ ಶೈಲಿಯಲ್ಲಿ ಅಂತ್ಯಗೊಳಿಸಿದರು. 199 ರನ್ ಚೇಸಿಂಗ್ಗೆ ತೊಡಗಿದ್ದ ನಾಟಿಂಗ್ಹ್ಯಾಮ್ 6 ವಿಕೆಟ್ಗಳಿಂದ ಜಯ ಸಾಧಿಸಿತ್ತು.
ಶಾ ಔಟಾಗದೆ 125 ರನ್(76 ಎಸೆತ, 15 ಬೌಂಡರಿ, 7 ಸಿಕ್ಸರ್)ಗಳಿಸಿದ್ದಾರೆ. ಲೆಗ್ ಸ್ಪಿನ್ನರ್ ಸ್ಕಾಟ್ ಬಾರ್ಥ್ವಿಕ್ ಎಸೆದ 21ನೇ ಓವರ್ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 24 ರನ್ ಸೂರೆಗೈದರು.
24ರ ಹರೆಯದ ಶಾ ವಾರಾರಂಭದಲ್ಲಿ ಸೊಮರ್ಸೆಟ್ ವಿರುದ್ಧ ದ್ವಿಶತಕ ಸಿಡಿಸಿದ್ದರು. 153 ಎಸೆತಗಳಲ್ಲಿ 244 ರನ್ ಗಳಿಸಿದ್ದ ಶಾ 50 ಓವರ್ ಸ್ಪರ್ಧೆಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಸಹಿತ ಲಿಸ್ಟ್ ಎ ಕ್ರಿಕೆಟ್ನಲ್ಲಿ ಹಲವಾರು ದಾಖಲೆ ಪುಡಿಗಟ್ಟಿದ್ದರು.