ಹ್ಯಾಟ್ರಿಕ್ ಜೊತೆಗೆ 5 ವಿಕೆಟ್ ಉರುಳಿಸಿದ ಪಾಕ್ ವೇಗಿ! – Kannada News | Abbas Afridi Takes First Hattrick Montreal Tigers confirms final ticket of the Global T20 Canada 2023
Global T20 Canada 2023: ಈ ಹ್ಯಾಟ್ರಿಕ್ ಜೊತೆಗೆ, ಈ ಪಂದ್ಯದಲ್ಲಿ ಅವರು ತಮ್ಮ 4 ಓವರ್ ಖೋಟಾದಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದರು.
ಅಬ್ಬಾಸ್ ಅಫ್ರಿದಿ
22ರ ಹರೆಯದ ಪಾಕಿಸ್ತಾನದ ವೇಗದ ಬೌಲರ್ ಅಬ್ಬಾಸ್ ಅಫ್ರಿದಿ (Abbas Afridi) ಕೆನಡಾದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ (Global T20 Canada 2023) ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ವ್ಯಾಂಕೋವರ್ ನೈಟ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ (Vancouver Knights vs Montreal Tigers) ನಡುವೆ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮಾಂಟ್ರಿಯಲ್ ಟೈಗರ್ಸ್ ತಂಡದ ಪರ ಕಣಕ್ಕಿಳಿದಿದ್ದ ಈ ಪಾಕ್ ವೇಗಿ ಹ್ಯಾಟ್ರಿಕ್‌ನೊಂದಿಗೆ 5 ವಿಕೆಟ್‌ಗಳನ್ನು ಪಡೆದು ತಮ್ಮ ತಂಡಕ್ಕೆ ಫೈನಲ್‌ಗೆ ಟಿಕೆಟ್ ಖಚಿತ ಪಡಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವ್ಯಾಂಕೋವರ್ ನೈಟ್ಸ್ ತಂಡ, ಅಬ್ಬಾಸ್ ಅಫ್ರಿದಿ ಅವರ ದಾಳಿಗೆ ನಲುಗಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತರವಾಗಿ ಮಾಂಟ್ರಿಯಲ್ ಟೈಗರ್ಸ್ ತಂಡ 3 ಎಸೆತಗಳು ಬಾಕಿ ಇರುವಂತೆಯೇ1 ವಿಕೆಟ್‌ನಿಂದ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ವ್ಯಾಂಕೋವರ್ ನೈಟ್ಸ್ ತಂಡದ ಮೊದಲ ವಿಕೆಟ್ 33 ರನ್‌ಗಳಿಗೆ ಪತನವಾಯಿತು. ಇದರ ನಂತರ, ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಬಂದಿದ್ದರಿಂದ ತಂಡದ ಮೊತ್ತ 90 ರನ್‌ಗಳ ಗಡಿ ದಾಟಿತು. ಈ ಹಂತದವರೆಗೆ ವ್ಯಾಂಕೋವರ್ ನೈಟ್ಸ್ ತಂಡ ಪಂದ್ಯದಲ್ಲಿ ಭಿಗಿ ಹಿಡಿತ ಸಾಧಿಸಿತ್ತು. ಆದರೆ, ಆ ನಂತರ ದಾಳಿಗಿಳಿದ ಅಬ್ಬಾಸ್ ಅಫ್ರಿದಿ, ವ್ಯಾಂಕೋವರ್ ನೈಟ್ಸ್ ತಂಡದ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು.
ಹ್ಯಾಟ್ರಿಕ್ ಸಹಿತ 5 ವಿಕೆಟ್
ಮಾಂಟ್ರಿಯಲ್ ಟೈಗರ್ಸ್ ಪರ 13ನೇ ಓವರ್ ಬೌಲ್ ಮಾಡಲು ಬಂದ ಪಾಕಿಸ್ತಾನದ ಬಲಗೈ ವೇಗಿ ಅಬ್ಬಾಸ್ ಅಫ್ರಿದಿ 4, 5 ಮತ್ತು 6ನೇ ಎಸೆತಗಳಲ್ಲಿ ಸತತ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಹ್ಯಾಟ್ರಿಕ್ ವಿಕೆಟ್‌ಗೆ ಬಲಿಯಾದ ಬ್ಯಾಟ್ಸ್‌ಮನ್‌ಗಳಲ್ಲಿ ಕಾರ್ಬಿನ್ ಬಾಸ್, ರಾಸಿ ವಾನ್ ಡೆರ್ ಡುಸ್ಸೆನ್ ಮತ್ತು ನಜಿಬುಲ್ಲಾ ಝದ್ರಾನ್ ಅವರ ಹೆಸರುಗಳು ಸೇರಿದ್ದವು. ಈ ಹ್ಯಾಟ್ರಿಕ್ ಜೊತೆಗೆ, ಈ ಪಂದ್ಯದಲ್ಲಿ ಅವರು ತಮ್ಮ 4 ಓವರ್ ಖೋಟಾದಲ್ಲಿ 29 ರನ್ ನೀಡಿ 5 ವಿಕೆಟ್ ಪಡೆದರು. ಅರ್ಥಾತ್, ವ್ಯಾಂಕೋವರ್ ನೈಟ್ಸ್ ತಂಡ ಉರುಳಿಸಿದ 6 ವಿಕೆಟ್‌ಗಳಲ್ಲಿ 5 ವಿಕೆಟ್ಗಳು ಅಬ್ಬಾಸ್ ಅಫ್ರಿದಿ ಖಾತೆಗೆ ಸೇರಿದವು.
ಕೊನೆಗೂ ಗೆದ್ದ ಮಾಂಟ್ರಿಯಲ್ ಟೈಗರ್ಸ್
ಗೆಲುವಿಗೆ 138 ರನ್‌ಗಳ ಗುರಿ ಬೆನ್ನತ್ತಿದ ಮಾಂಟ್ರಿಯಲ್ ಟೈಗರ್ಸ್ ಕೂಡ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು. ಅಬ್ಬಾಸ್ ಅಫ್ರಿದಿ ದಾಳಿಗೆ ಬಲಿಯಾದ ವ್ಯಾಂಕೋವರ್ ನೈಟ್ಸ್, ಕಡಿಮೆ ಮೊತ್ತದ ಟಾರ್ಗೆಟ್ ನಡುವೆಯೂ ಪಂದ್ಯದಲ್ಲಿ ಕೊನೆಯ ಓವರ್‌ವರೆಗೂ ಗೆಲುವಿಗಾಗಿ ಹೋರಾಡಿತು. ಅಷ್ಟೇ ಅಲ್ಲ, ಮಾಂಟ್ರಿಯಲ್ ಟೈಗರ್ಸ್ ತಂಡದ 9 ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಯಿತು. ಹೀಗಾಗಿ ಒಂದು ಹಂತದಲ್ಲಿ ವ್ಯಾಂಕೋವರ್ ನೈಟ್ಸ್ ತಂಡ ಗೆಲ್ಲುವ ಸೂಚನೆ ನೀಡಿತ್ತು. ಆದರೆ ಮಾಂಟ್ರಿಯಲ್ ಟೈಗರ್ಸ್ ತಂಡ ಅಂತಿಮವಾಗಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ಮಾಂಟ್ರಿಯಲ್ ಟೈಗರ್ಸ್ ತಂಡ ಗ್ಲೋಬಲ್ ಟಿ20 ಕೆನಡಾ ಲೀಗ್ನ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:38 am, Sun, 6 August 23