PPE Kit: ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ವಿತರಣೆ; ವಾಣಿವಿಲಾಸ ಘಟನೆ ಬಳಿಕ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ
ಬೆಂಗಳೂರು: ಗರ್ಭಿಣಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಆತಂಕ ಸೃಷ್ಟಿಯಾಗಿತ್ತು. ಈಗಾಗಲೇ ವಾಣಿ ವಿಲಾಸ ಆಸ್ಪತ್ರೆ ಆಡಳಿತ ಮಂಡಳಿ ಜತೆ ಮಾತನಾಡಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ವಾಣಿ ವಿಲಾಸ ನಾನ್ ಕೋವಿಡ್ ಆಸ್ಪತ್ರೆ ಆಗಿದ್ದರಿಂದ ಪಿಪಿಇ ಕಿಟ್ ಇರಲಿಲ್ಲ ಅನ್ನೋದು ಸತ್ಯ. ಇದರಿಂದಾಗಿ ಆತಂಕಗೊಂಡು ಸ್ವಲ್ಪ ತ್ರಾಸವಾಗಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಗಳನ್ನು ಒದಗಿಸುತ್ತೇವೆ. ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ. ವೈದ್ಯರು, ನರ್ಸ್ಗಳು, ವೈದ್ಯ ವಿದ್ಯಾರ್ಥಿಗಳು ಯಾರೂ ಗಾಬರಿ ಪಡಬೇಕಿಲ್ಲ. ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಧೈರ್ಯ ಹೇಳಿದರು.
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಗರ್ಭಿಣಿಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಆಸ್ಪತ್ರೆ ಸಿಬ್ಬಂದಿಗಳು ಕೆಲಸ ಮಾಡಲು ಹಿಂದೇಟು ಹಾಕಿದ್ದರು. ಆಸ್ಪತ್ರೆ ಸಿಬ್ಬಂದಿಗೆ ಯಾವುದೇ ರೀತಿಯ ಸುರಕ್ಷಾ ವ್ಯವಸ್ಥೆಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.