ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ನ್ಯಾಯಾಂಗ ತನಿಖೆಗೆ ಯಾವುದೇ ಸೌಲಭ್ಯ ನೀಡದ ರಾಜ್ಯ ಸರ್ಕಾರ – Kannada News | PSI recruitment scam case Karnataka Congress govt has not provided any facility for judicial probe
ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ವಿಚಾರಣಾ ಆಯೋಗವನ್ನು ರಚಿಸ ಜುಲೈ 22,2203 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ತನಿಖೆಗೆ ಯಾವುದೇ ಸೌಲಭ್ಯ ಒದಗಿಸಿಲ್ಲ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಸೌಲಭ್ಯ ನೀಡದ ರಾಜ್ಯ ಸರ್ಕಾರ
ಬೆಂಗಳೂರು, ಆಗಸ್ಟ್ 10: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್‌ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣವನ್ನು ಜೀವಂತವಾಗಿಯೇ ಇಟ್ಟುಕೊಂಡು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ (Congress), ಸರ್ಕಾರ ರಚಿಸಿದ ನಂತರ ಜುಲೈ 22 ರಂದು ನ್ಯಾಯಾಂಗ ತನಿಖೆಗೆ ವಿಚಾರಣಾ ಆಯೋಗವನ್ನು ರಚಿಸಿ ಆದೇಶ ಹೊರಡಿಸಿತ್ತು. ವಿಪರ್ಯಾಸವೆಂದರೆ, ಇದುವರೆಗೆ ಯಾವುದೇ ಸೌಲಭ್ಯ ಒದಗಿಸದೇ ಇರುವುದು.
ನಿವೃತ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು. ಅಲ್ಲದೆ ಪೊಲೀಸ್ ಇಲಾಖೆ ಜೊತೆಗೆ ಸಿಐಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಮೇ 31 ರಂದು ನಿವೃತ್ತರಾದ ನ್ಯಾಯಮೂರ್ತಿ ವೀರಪ್ಪ ಅವರು ನಿರ್ಭೀತ ನ್ಯಾಯಾಧೀಶರೆಂದೇ ಹೆಸರಾಗಿದ್ದರು. ACB (ಭ್ರಷ್ಟಾಚಾರ ನಿಗ್ರಹ ದಳ) ರದ್ದು ಪಡಿಸಿ ಲೋಕಾಯುಕ್ತ ಮರುಸ್ಥಾಪಿಸುವ ಪೀಠದ ನೇತೃತ್ವವನ್ನು ಅವರು ವಹಿಸಿದ್ದರು. ಗೃಹ ಇಲಾಖೆಯು ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರಿಗೆ ತನಿಖೆ ಪೂರ್ಣಗೊಳಿಸಿ ಮೂರು ತಿಂಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೇಳಿದೆ.
ಕಳೆದ ವರ್ಷ ಪಿಎಸ್‌ಐ ನೇಮಕಾತಿ ಹಗರಣ ಹೊರಬಿದ್ದಿತ್ತು. ಪರೀಕ್ಷಾ ಫಲಿತಾಂಶಗಳನ್ನು ತಿರುಚಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಇದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್‌ಗೆ ದೊಡ್ಡ ಸಾಧನವಾಗಿತ್ತು.
545 ಪಿಎಸ್‌ಐಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ನಡೆಯಿತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 110 ಜನರನ್ನು ಬಂಧಿಸಲಾಗಿದೆ.
ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಇನ್ನು ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಬಂಧಿತ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್ ವಿರುದ್ಧ ಭ್ರಷ್ಟ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಜರುಗಿಸಲು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಕೇಂದ್ರ ಸರಕಾರ ಈಗಾಗಲೇ ಅನುಮತಿ ಕೂಡ ನೀಡಿದೆ.
ಪಿಎಸ್ಐ ಹಗರಣದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿ ಹಲವು ದಿನಗಳೇ ಕಳೆದರೂ ಆದೇಶಿಸಿರುವ ಕಾಂಗ್ರೆಸ್ ಸರ್ಕಾರ ತನಿಖೆಗೆ ಪೂರಕವಾಗಿ ಮೂಲಭೂತ ಸೌಕರ್ಯವನ್ನು ಇನ್ನೂ ಒದಗಿಸಿಲ್ಲ. ಮೊದಲಿಗೆ ವಿಕಾಸ ಸೌಧದಲ್ಲಿರುವ ಕೊಠಡಿ ಸಂಖ್ಯೆ 133 ಅನ್ನು ತನಿಖಾ ಆಯೋಗಕ್ಕೆ ನೀಡೋದಾಗಿ ಹೇಳಿತ್ತು. ಆದರೆ ಆ ಕೊಠಡಿ ನೀಡದೇ ಬಳಿಕ ವಿಧಾನಸೌಧದಲ್ಲಿ ಕಚೇರಿಯನ್ನು ಒದಗಿಸುವುದಾಗಿ ತಿಳಿಸಿತ್ತು.
ಆದರೆ ಈವರೆಗೆ ತನಿಖಾ ಆಯೋಗಕ್ಕೆ ಕಚೇರಿಯನ್ನು ನೀಡಿಲ್ಲ. ಹೀಗಾಗಿ ತನಿಖೆ ಇನ್ನೂ ಆರಂಭವೇ ಆಗಿಲ್ಲ. ಹಾಗಾಗಿ ಈ ವಿಳಂಬ ನೀತಿಯಿಂದಾಗಿ ಸರ್ಕಾರದ ನಡೆ ಮೇಲೆ ಸಾಕಷ್ಟು ಅನುಮಾನ ಮೂಡಲು ಕಾರಣವಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಅನ್ನೋ ರೀತಿ ಬಿಂಬಿಸಲು ಆದೇಶ ಹೊರಡಿಸಿದರೇ? ನಿಜಕ್ಕೂ ತನಿಖೆ ನಡೆಸಲು ಕಾಂಗ್ರೆಸ್ ಆಸಕ್ತಿ ತೋರುತ್ತಿಲ್ಲವೇ? ಅನ್ನೋ ಅನುಮಾನ ಹುಟ್ಟುಹಾಕಿದೆ.