ಕಾಂಗ್ರೆಸ್ ಶುರುವಾಡಿದ್ದ ರೀತಿಯಲ್ಲೇ ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ ಸಿಎಸ್’ ಅಭಿಯಾನ – Kannada News | Karnataka BJP Starts Paycs campaign against Minister Chaluvaraya Swamy For Bribe Letter
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪೇ ಸಿಎಂ ಅಭಿಯಾನ ಭಾರೀ ಗಮನಸೆಳೆದಿತ್ತು. ಇದೀಗ ಅದೇ ಮಾದರಿಯಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಂಭಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಪೇ ಸಿಎಸ್ ಅಭಿಯಾನ
ಬೆಂಗಳೂರು, (ಆಗಸ್ಟ್ 10): ಬಿಜೆಪಿ(BJP) ಸರ್ಕಾರದ ಅವಧಿಯ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ವಿರುದ್ಧ ಕಾಂಗ್ರೆಸ್ ಮಾಡಿದ್ದ ಪೇ ಸಿಎಂ (PayCM) ಅಭಿಯಾನ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಭಾರೀ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಸಾಲದಕ್ಕೆ ಚುನಾವಣೆಯಲ್ಲಿ ಸೋಲಿಗೆ ಒಂದು ಭಾಗವೂ ಆಗಿದೆ. ಇದೀಗ ಬಿಜೆಪಿ ಅದೇ ಪೇ ಸಿಎಂ ರೀತಿ ಕಾಂಗ್ರೆಸ್ ವಿರುದ್ಧ ಅಭಿಯಾನ ಶುರು ಮಾಡಿಕೊಂಡಿದೆ. ಹೌದು…ಪೇ ಸಿಎಂ ಮಾದರಿಯಲ್ಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್(Paycs) ಅಭಿಯಾನ ಆರಂಭವಾಗಿದೆ. ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಗ್ರೂಪ್ ನಿಂದ ಇಂತಹ ಪೋಸ್ಟ್ ಆಗಿದ್ದು, ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ದಾರಾಳವಾಗಿ ಸ್ಕ್ಯಾನ್ ಮಾಡಿ ಲಂಚ ಪಾವತಿ ಮಾಡಿ. ಧನ್ಯವಾದಗಳು, ಇಂತಿ ನಿಮ್ಮ ಭ್ರಷ್ಟ ಚೆಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಟ್ಯಾಗ್ ಲೈನ್ ಹಾಕಲಾಗಿದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು ವಿವಾದದ ಗೂಡಲ್ಲಿ ಸಿಲುಕಿದ್ದಾರೆ.. ಈ ಹಿಂದೆ KSRTC ಡ್ರೈವರ್ ಆತ್ಮಹತ್ಯೆ ಯತ್ನದ ಕೇಸ್ನಲ್ಲಿ ಸಚಿವರ ಹೆಸರು ಕೇಳಿಬಂದಿತ್ತು. ಇದೀಗ ಮಂಡ್ಯ(Mandya) ಜಿಲ್ಲೆಯ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರಿಗೆ ಸಚಿವರು ಹಣಕ್ಕೆ(Bribe) ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ(governor )ಪತ್ರ ಬರೆಯಲಾಗಿದ್ದು, ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯ ಜಟಾಪಟಿ ಸೃಷ್ಟಿಸಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲು ರಣತಂತ್ರ ರೂಪಿಸುತ್ತಿದೆ. ಅದರ ಮೊದಲ ಭಾಗವಾಗಿ ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ ಅಭಿಯಾನ ಶುರು ಮಾಡುವಂತಿದ್ದು, ಅದರ ಮಾದರಿ ಪೋಸ್ಟ್ ಇದೀಗ ಬಹಿರಂಗವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾತ್ರೋ ರಾತ್ರಿ ಬೆಂಗಳೂರಿನ ಬೀದಿಯಲ್ಲಿ ಕಾಣಿಸಿಕೊಂಡ ಪೇ ಸಿಎಂ ಪೋಸ್ಟರ್, ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡಿದ 40% ಸರ್ಕಾರ ಅಭಿಯಾನ ಮಾಧ್ಯಮಗಳ ಗಮನಸೆಳೆದಿತ್ತು. ಕಾಂಗ್ರೆಸ್ ಅಭಿಯಾನ ಹಾಗೂ ಚುನಾವಣಾ ತಂತ್ರಗಾರಿಕೆ ಹಿಂದೆ ಒಂದು ವ್ಯವಸ್ಥಿತವಾದ ತಂಡ ಕೆಲಸ ಮಾಡಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ