ಕೊರೋನಾ ನಿಯಂತ್ರಣ ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಬೇಡ – ಪ್ರವೀಣ್ ಸೂದ್ ಆದೇಶ
ಬೆಂಗಳೂರು(ಏ.29): ಕೊರೋನಾ ವೈರಸ್ ನಿಯಂತ್ರಣ ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸರು ಬೇಡ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ 55 ವರ್ಷ ದಾಟಿದ ಪೊಲೀಸ್ ಸಿಬ್ಬಂದಿಯನ್ನು ಕೊರೋನಾ ವೈರಸ್ ಹರಡದಂತೆ ತಡೆಯುವ ಕರ್ತವ್ಯಗಳಿಗೆ ನಿಯೋಜನೆ ಮಾಡಬೇಡಿ. ಈ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗೆ ಪ್ರವೀಣ್ ಸೂದ್ ಸೂಚಿಸಿದ್ದಾರೆ.
ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಯಾವುದೇ ಸಿಬ್ಬಂದಿಯನ್ನು ಕೊರೋನಾ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಬೇಡಿ. ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಠಾಣೆಯೊಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಕಬೇಕು ಎಂದು ಪ್ರವೀಣ್ ಸೂದ್ ಹೊರಡಿಸಿದ ಆದೇಶದ ಪ್ರತಿಯಲ್ಲಿ ನಿರ್ದೇಶಿಸಲಾಗಿದೆ.
ಇನ್ನು, ಮಾರಕ ಕೊರೋನಾ ವೈರಸ್ ಸೋಂಕು ವಯಸ್ಸಾದವರಿಗೆ ಬೇಗ ಹರಡುತ್ತದೆ. ಹಾಗಾಗಿ ಪೊಲೀಸರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಪ್ರಾಮುಖ್ಯತೆ ಆಗಬೇಕು. ಆದ್ದರಿಂದ 55 ವರ್ಷ ದಾಟಿದ ಪೊಲೀಸರ ಕೋವಿಡ್ ನಿಯಂತ್ರಣ ಉದ್ದೇಶಕ್ಕೆ ರಸ್ತೆ, ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯಕ್ಕೆ ಹಾಕಬೇಡಿ ಎಂದು ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂದ್ ಆದೇಶಿಸಿದ್ದಾರೆ.
ಭಾರತದಲ್ಲಿ ಕೊರೋನಾ ಆರ್ಭಟವೂ ಮುಂದುವರಿದಿದೆ. ದೆಹಲಿ, ಉತ್ತರಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳು ನಾಡು, ಪಂಜಾಬ್, ಬಿಹಾರ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿಗೆ ದಿನದಿಂದ ದಿನಕ್ಕೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹಾಗೆಯೇ ಮಹಾರಾಷ್ಟ್ರದಲ್ಲಿಯೂ ಪತ್ರಕರ್ತರ ಬೆನ್ನಲ್ಲೇ ಕೊರೋನಾ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ಸೋಂಕು ತಗುಲಿದೆ. 96 ಮಂದಿಗೆ ಕೊರೋನಾ ಬಂದಿದ್ದು, ಈ ಪೈಕಿ 15 ಜನ ಅಧಿಕಾರಿಗಳಿಳು ಇದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಹೀಗೊಂದು ನಿರ್ಧಾರ ಕರ್ನಾಟಕ ಪೊಲೀಸ್ ಇಲಾಖೆ ತೆಗೆದುಕೊಂಡಿದೆ.