ಮೇ 3ರ ಬಳಿಕವೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆ; ಪಿಎಂ-ಸಿಎಂಗಳ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು
ನವದೆಹಲಿ(ಏ. 27): ಲಾಕ್ಡೌನ್ ಮುಂದುವರೆಸಬೇಕೋ ಬೇಡವೋ ಎಂದು ಚರ್ಚೆ ನಡೆಸಲು ಇಂದು ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಮೋದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಭೆಯಲ್ಲಿ ಬಹುತೇಕ ಮುಖ್ಯಮಂತ್ರಿಗಳು ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಂದುವರೆಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್ಡೌನ್ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದಾರೆ. ಮೇ 3ರ ಬಳಿಕ ಮತ್ತೆ 2 ವಾರ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಸಿಎಂ-ಪಿಎಂ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೋಟೆಲ್, ವಿಮಾನಯಾನಕ್ಕೆ 6 ತಿಂಗಳು ಜಿಎಸ್ಟಿ ವಿನಾಯಿತಿ; ರಿಯಲ್ ಎಸ್ಟೇಟ್ಗೆ ತೆರಿಗೆ ದರ ಕಡಿತಕ್ಕೆ ಮನವಿ
ಮೇಘಾಲಯ- ತುರ್ತು ಅವಶ್ಯಕತೆಗಳ ವಿನಾಯಿತಿಯೊಂದಿಗೆ ಲಾಕ್ ಡೌನ್ ಮುಂದುವರಿಸಿ. ವೈದ್ಯಕೀಯ ಅವಶ್ಯಕತೆಗಳು ಹೊರೆತುಪಡಿಸಿ ಅಂತರ್ ಜಿಲ್ಲೆ, ರಾಜ್ಯಗಳ ಗಡಿ ಬಂದ್ ಮಾಡಿ
ಮೀಜೊರಾಂ – ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ
ಪುದುಚೇರಿ – ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ಹಣಕಾಸಿನ ನೆರವು ನೀಡಿ. ಲಾಕ್ಡೌನ್ ಬಳಿಕ ಕೈಗಾರಿಕೆ ತೆರೆಯಲು ಅವಕಾಶ ನೀಡಿ.ಉತ್ತರಾಖಂಡ- ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ. ಸರ್ಕಾರ ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಬರಬೇಕಿದೆ. ಮನರೇಗಾ ಸೇರಿದಂತೆ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಿದೆ.
ಒರಿಸ್ಸಾ- ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್ಡೌನ್ ಮುಂದುವರಿಸಿ. ಸಾರ್ವಜನಿಕ ಸಭೆ, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿ. ರಾಜ್ಯಗಳೊಳಗಿನ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ. ರೋಗವನ್ನು ನಿಗ್ರಹಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಆರ್ಥಿಕತೆಯನ್ನು ಕಿಕ್‌ಸ್ಟಾರ್ಟ್ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಹಿಮಾಚಲಪ್ರದೇಶ- ರೋಗದ ಲಕ್ಷಣಗಳನ್ನು ಹೊಂದಿರುವ ಜನರನ್ನು ಆಕ್ರಮಣಕಾರಿಯಾಗಿ ಪರೀಕ್ಷಿಸುತ್ತಿದ್ದೇವೆ. ಗಡಿ ರಾಜ್ಯಗಳು ಹೆಚ್ಚು ಪ್ರಕರಣಗಳನ್ನು ವರದಿ ಮಾಡಿವೆ. ಹಿಮಾಚಲದ 12 ಜಿಲ್ಲೆಗಳಿಗೆ ಯಾವುದೇ ಸಕಾರಾತ್ಮಕ ಪ್ರಕರಣಗಳಿಲ್ಲ. ಬಡ ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ನೆರವು ನೀಡಲು ರಾಜ್ಯವು ಸಿದ್ಧವಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಸ್ಥಿತಿಯಲ್ಲಿದ್ದೇವೆ. ಇತರೆ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಿ.