ಸದ್ದಿಲ್ಲದೆ ನಡೆಯುತ್ತಿರುವ ಜಾತ್ರೆಗಳು – ಬ್ರೇಕ್ ಹಾಕಲು ಕಲಬುರ್ಗಿ ಪೊಲೀಸರ ಹೊಸ ಐಡಿಯಾ ಏನ್ ಗೊತ್ತಾ…?
ಕಲಬುರ್ಗಿ (ಏ.26): ನಿಷೇಧದ ನಡುವೆ ರಥೋತ್ಸವಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಗಳನ್ನು ತಡೆಗಟ್ಟಲು ಪೊಲೀಸರು ಕಲಬುರ್ಗಿಯಲ್ಲಿ ಹೊಸ ಐಡಿಯಾ ಹುಡುಕಿದ್ದಾರೆ. ರಥದ ಸುತ್ತ ಗುಂಡಿ ತೋಡುವ ಬದಲಿಗೆ ರಥ ಮುಂದೆ ಸಾಗದಂತೆ ಮಣ್ಣಿನ ರಾಶಿ ಹಾಕುವ ತಂತ್ರ ಮಾಡಿ, ಜಾತ್ರೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ರಥದ ಸುತ್ತ ಗುಂಡಿ ತೋಡಿ ರಥೋತ್ಸವ ನಿಲ್ಲಿಸಿದ ಆಳಂದ ತಾಲೂಕಿನ ಮುನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಮುನ್ನಹಳ್ಳಿಯ ಮಸನ ಸಿದ್ದೇಶ್ವರ ಜಾತ್ರೆ ಹಿನ್ನೆಲೆ ಪೊಲೀಸರಿಂದ ಈ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಬಸವಣ್ಣನ ಸಮಕಾಲಿನ ವಚನಕಾರರಾಗಿದ್ದ ಮಸನ ಸಿದ್ದೇಶ್ವರ ಜಾತ್ರೆ ನಿನ್ನೆ ನಡೆಯಬೇಕಿತ್ತು. ಆದರೆ, ರಥದ ಸುತ್ತಲೂ ಗುಂಡಿ ತೋಡುವ ಮೂಲಕ ತೇರು ಯಾವ ಕಡೆಯೂ ಚಲಿಸದಂತೆ ಮುನ್ನಚ್ಚರಿಕೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿಯೂ ಇದೇ ರೀತಿಯ ತಂತ್ರಗಾರಿಕೆಗೆ ಮೊರೆ ಹೋಗಲಾಗಿದೆ. ಆದರೆ ಇಲ್ಲಿ ತಗ್ಗು ತೋಡುವ ಬದಲಿಗೆ ರಥದ ಸುತ್ತ ಮಣ್ಣಿನ ರಾಶಿ ಹಾಕಿ ಮುಂದೆ ಚಲಿಸದಂತೆ ಕ್ರಮ ಕೈಗೊಂಡಿದ್ದಾರೆ.
ಆ ಮೂಲಕ ಬಸವೇಶ್ವರ ದೇವರ ಜಾತ್ರೆಗೂ ಮುಂಚಿತವಾಗಿಯೇ ಬ್ರೇಕ್ ಹಾಕಿದ್ದಾದೆ. ಪ್ರತಿ ವರ್ಷ ಬಸವ ಜಯಂತಿಯಂದು ಇಲ್ಲಿ ಜಾತ್ರೆ ನಡೆಯುತ್ತಿತ್ತು. ಜಿಲ್ಲಾಡಳಿತದ ಮುನ್ನೆಚ್ಚರಿಕೆ ನಡುವೆಯೂ ಕೆಲ ಗ್ರಾಮಗಳಲ್ಲಿ ರಾತ್ರೋರಾತ್ರಿ ರಥೋತ್ಸವ ನೆರವೇರಿಸಲಾಗಿತ್ತು. ಆಳಂದ ತಾಲೂಕಿನ ಭೂಸನೂರ, ಕಲಬುರ್ಗಿ ತಾಲೂಕಿನ ಸಾವಳಗಿ ಗ್ರಾಮಗಳಲ್ಲಿ ಮಧ್ಯರಾತ್ರಿಯಲ್ಲಿ ಜಾತ್ರೆ ನಡೆದಿದ್ದರೆ, ರಾವೂರು ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ತೇರೆಳೆದು ಲಾಕ್ ಡೌನ್ ನಿಯಮ ಉಲ್ಲಂಘಿಸಲಾಗಿತ್ತು. ಹೀಗಾಗಿ ಆಳಂದ ಠಾಣೆ ಪೊಲೀಸ್ ರು ಅನಿವಾರ್ಯವಾಗಿ ತಗ್ಗು ತೋಡುವ, ಮಣ್ಣಿನ ರಾಶಿ ಹಾಕುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.