‘ಜುಲೈ ಬದಲಿಗೆ ಸೆಪ್ಟೆಂಬರ್ನಿಂದ ಕಾಲೇಜುಗಳನ್ನು ಓಪನ್ ಮಾಡಿ‘ – ಯುಜಿಸಿಗೆ ತಜ್ಞರ ಸಮಿತಿ ಶಿಫಾರಸ್ಸು
ಬೆಂಗಳೂರು(ಏ.25): ದೇಶಾದ್ಯಂತ ಜುಲೈನಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಸೆಪ್ಟೆಂಬರ್ನಿಂದ ಶುರು ಮಾಡುವಂತೆ ಯುಜಿಸಿಗೆ ಸಮಿತಿ ಶಿಫಾರಸ್ಸು ಮಾಡಿದೆ. ಕೊರೋನಾ ವೈರಸ್ ತಡೆಗೆ ಮುಂಜಾಗೃತ ಕ್ರಮವಾಗಿ ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್ ಮಾಡಿ ಆದೇಶಿಸಿತ್ತು. ಕ್ಲಾಸ್ ರೂಮ್ಗಳು ಶಟ್ಡೌನ್ ಆಗಿರುವುದರಿಂದ ಪರೀಕ್ಷೆಗಳು ಯಾವಾಗ ನಡೆಸಬೇಕು? ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು? ಎನ್ನುವುದರ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಯಜಿಸಿ 7 ಜನರ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿಯೂ ಯುಜಿಸಿಗೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಸೆಪ್ಟೆಂಬರ್ ತಿಂಗಳಿನಿಂದ ಕಾಲೇಜುಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ.
ಮಾರಕ ಕೊರೋನಾ ವೈರಸ್ ದೇಶದಲ್ಲಿ ಶರ ವೇಗದಲ್ಲಿ ಹರಡುತ್ತಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲ. ಹಾಗಾಗಿ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ. ವಿವಿಗಳು ನೀಡಿದ ವೇಳಾಪಟ್ಟಿಯಂತೆ ಕಾಲೇಜುಗಳು ಆರಂಭವಾಗದ ಕಾರಣ ಸಾಧ್ಯವಾದರೇ ವರ್ಷಾಂತ್ಯ ಅಥವಾ ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳನ್ನು ಜುಲೈನಲ್ಲಿ ಆನ್ಲೈನ್ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ.
ಮಾರ್ಚ್ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್ಡೌನ್ ತಂತ್ರ ಕೇಂದ್ರ ಅನುಸರಿಸಿದೆ. ಈ ಮಧ್ಯೆ ಸಮಿತಿಯೂ ಸೆಪ್ಟೆಂಬರ್ನಿಂದ ಕಾಲೇಜು ಆರಂಭಿಸುವಂತೆ ಶಿಫಾರಸ್ಸು ಮಾಡಿದ ಕಾರಣ ವರದಿ ಅನುಸಾರ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪರೀಕ್ಷೆಗಳ ಕುರಿತು ಯುಜಿಸಿ ಮಾರ್ಗಸೂಚಿ ಹೊರಡಿಸಲಿದೆ.