ಲಾಕ್‌ಡೌನ್ ಉಲ್ಲಂಘಿಸಿ ರಾಜ್ಯ ವ್ಯಾಪ್ತಿಯ ಆಳಸಮುದ್ರದಲ್ಲಿ ಗೋವಾ ಮೀನುಗಾರರಿಂದ ಮೀನುಗಾರಿಕೆ
ಕಾರವಾರ: ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಕಳೆದೊಂದು ವಾರದಿಂದ ಕೃಷಿಯೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆಗೂ ಅನುಮತಿ ನೀಡಿದ್ದು, ಆಳಸಮುದ್ರ ಮೀನುಗಾರಿಕೆಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿರಲಿಲ್ಲ. ಹೀಗಾಗಿ ಸಾಂಪ್ರದಾಯಿಕ ಪಾತಿ ದೋಣಿಗಳ ಮೀನುಗಾರರು ಮಾತ್ರ ಕಡಲಿಗಿಳಿದು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯದ ಪರ್ಸಿನ್, ಟ್ರಾಲರ್ ಬೋಟುಗಳು ಕಡಲಿಗಿಳಿಯದೇ ಲಂಗರು ಹಾಕಿದ್ದರೂ ಸಹ ಗೋವಾ ಭಾಗದ ಮೀನುಗಾರರು ಮಾತ್ರ ಎಗ್ಗಿಲ್ಲದೇ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.
ರಾಜ್ಯದ ಕರಾವಳಿಯ ಉತ್ತರಕನ್ನಡ ಸೇರಿದಂತೆ ಮೂರು ಜಿಲ್ಲೆಗಳು ಮೀನುಗಾರಿಕೆಯನ್ನೇ ಅವಲಂಭಿಸಿದ್ದು, ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಮುಖ್ಯ ಜೀವನೋಪಾಯವಾಗಿದೆ.
ಪರ್ಸಿನ್ ಹಾಗೂ ಟ್ರಾಲರ್ ಬೋಟುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವುದರಿಂದ ಕೊರೋನಾ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಅವಕಾಶ ನೀಡಿಲ್ಲ. ಆದರೆ ಲಾಕ್‌ಡೌನ್ ಆದೇಶ ಇಡೀ ದೇಶಕ್ಕೆ ಅನ್ವಯಿಸುತ್ತಿದ್ದರೂ ಸಹ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಗೋವಾ ರಾಜ್ಯದಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಲು ಅವಕಾಶ ನೀಡಿದ್ದು, ಅಲ್ಲಿನ ಪರ್ಸಿನ್, ಟ್ರಾಲರ್ ಬೋಟುಗಳು ಕರ್ನಾಟಕ ಭಾಗದ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿವೆ.
ಕಾರವಾರ ಮೀನುಗಾರರಿಗೂ ಅವಕಾಶಕ್ಕೆ ಬೇಡಿಕೆ
ಗೋವಾ ಭಾಗದ ಆಳಸಮುದ್ರ ಮೀನುಗಾರಿಕಾ ಬೋಟುಗಳು ಉತ್ತರಕನ್ನಡ ಜಿಲ್ಲೆಯ ಭಟ್ಕಳವರೆಗಿನ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಆಗಮಿಸುತ್ತಿವೆ. ಅಷ್ಟೇ ಅಲ್ಲದೇ ನಿಷೇಧಿತ ಲೈಟ್ ಫಿಶಿಂಗ್ ಅನ್ನು ಸಹ ಗೋವಾ ಮೀನುಗಾರರು ನಡೆಸುತ್ತಿದ್ದು, ಇದರಿಂದ ರಾಜ್ಯದ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಮೊದಲೇ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದಾಗಿ ಸಾಲ ಮಾಡಿ ಮೀನುಗಾರಿಕೆ ಪ್ರಾರಂಭಿಸಿದ್ದ ಮೀನುಗಾರರು ಸಂಕಷ್ಟದಲ್ಲಿದ್ದರು. ಇದೀಗ ಗೋವಾ ಮೀನುಗಾರರು ರಾಜ್ಯದಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದರೂ ಸಹ ಮೀನುಗಾರಿಕಾ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಗೋವಾದಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕೆ ಪ್ರಾರಂಭಿಸಿದ್ದರೂ ರಾಜ್ಯದಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ನೀಡದಿರುವುದು ಮೀನುಗಾರರ ಗೊಂದಲಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಬೇಕು ಅಂತಾ ಒತ್ತಾಯಿಸಿದ್ದಾರೆ.