ಕ್ಷೇತ್ರದಿಂದ ವಿಮುಖಗೊಂಡ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಜನರ ಆಕ್ರೋಶ
ಕಾರವಾರ(ಏ.24): ಇಡೀ ದೇಶ ಕೊರೋನಾ ವೈರಸ್ನಿಂದ ಬಳಲುತ್ತಿದೆ. ಅಲ್ಲಿ ಇಲ್ಲಿ ಜನಪ್ರತಿನಿಧಿಗಳು ತಮ್ಮಕ್ಷೇತ್ರದ ಜನರಿಗೆ ಒಂದಿಷ್ಟು ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಲಾಕ್ ಡೌನ್ ಆಗಿ ಒಂದು ತಿಂಗಳು ಮುಗಿದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮಾತ್ರ ಕ್ಷೇತ್ರದ ಜನತೆ ಬಗ್ಗೆ ಕಾಳಜಿ ತೋರಿಸುವಲ್ಲಿ ವಿಫಲರಾಗಿದ್ದಾರೆ.
ಅನಂತಕುಮಾರ್ ಹೆಗಡೆ ಅಂದ್ರೆ ವಿವಾದಾತ್ಮಕ ಹೇಳಿಕೆಯ ಸರದಾರ ಎಂದೇ ಕರೆಯುತ್ತಾರೆ ಜನ. ಹಿಂದುತ್ವದ ಬಗ್ಗೆ ಮಾತನಾಡಿ ಯುವ ಪೀಳಿಗೆಯ ದಾರಿ ತಪ್ಪಿಸುವ ಆರೋಪ ಇರುವ ಸಂಸದ ಅನಂತಕುಮಾರ್ ಹೆಗಡೆ ಈಗ ಕ್ಷೇತ್ರದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಲಾಕ್ ಡೌನ್ನಿಂದ ದಿನಗೂಲಿ ನೌಕರರ ಬದುಕು ಹಸಿವೆಯಿಂದ ಬಾಡಿ ಬೆಂಡಾಗಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಸಂಸದ ಮಾತ್ರ ಜನರಿಗೆ ಧೈರ್ಯ ಹೇಳುವ ಮನಸ್ಸು ಮಾಡಿಲ್ಲ.
ಕ್ಷೇತ್ರದಲ್ಲಿ ಪ್ರತಿ ಜನಪ್ರತಿನಿಧಿಗಳು ತಮ್ಮದೇ ಆದ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುವವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ. ಆದರೆ, ಅನಂತಕುಮಾರ ಹೆಗಡೆ ಮಾತ್ರ ಒಂದು ತಿಂಗಳಿಂದ ಹೋಂ ಕ್ವಾರಂಟೈನ್ ಆಗಿ ಮನೆ ಗೇಟ್ ಕೂಡಾ ದಾಟಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜನರನ್ನ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಉಪಯೋಗಕ್ಕೆ ತಗೆದುಕೊಳ್ಳುವ ಅನಂತಕುಮಾರ್ ಹೆಗಡೆ ಈಗ ಮನೆ ಬಿಟ್ಟು ಬರದೆ ಕ್ಷೇತ್ರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.