ಕೊರೋನಾ ಸಂಕಷ್ಟ ಸಮಯದಲ್ಲಿ ಹಣ ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಮುಖ್ಯಮಂತ್ರಿಗಳು
ನವದೆಹಲಿ: ರಾಜ್ಯಗಳಿಗೆ ಸಂಪನ್ಮೂಲ ಕೊಡದೆ ಅಸಹಕಾರ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖ್ಯಮಂತ್ರಿಗಳು ಅಸಮಾಧಾನ ಹೊರಹಾಕಿದ್ದಾರೆ.
ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಹಣ ಇಲ್ಲದೆ ಈ ಕಷ್ಟದ ಪರಿಸ್ಥಿತಿ ನಿಭಾಯಿಸುವುದು ಹೇಗೆ? ಎಂದು ಕೇಂದ್ರ ಸರ್ಕಾರದ ಮೇಲೆ ಪಂಜಾಬ್, ರಾಜಸ್ಥಾನ, ಪುದುಚೇರಿ, ಛತ್ತೀಸ್ಗಢ ಕಾಂಗ್ರೆಸ್ ಮುಖ್ಯಮಂತ್ರಿಗಳು ಮುಗಿಬಿದ್ದು, ಕೂಡಲೇ ಪ್ಯಾಕೇಜ್ ಘೋಷಿಸುವಂತೆ ಕೇಂದ್ರಕ್ಕೆ ಒತ್ತಾಯ ಹಾಕಿದ್ದಾರೆ.
ಕೊರೋನಾ ವಿಶೇಷ ಪ್ಯಾಕೇಜ್ ಬಿಡುಗಡೆ ವಿಷಯವಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಪ್ರಧಾನಿ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಕೊರೋನಾ ಸಂಕಷ್ಟ ಸಮಯದಲ್ಲಿ ಮಾರಕ ಸೋಂಕಿನ ವಿರುದ್ಧ ಹೋರಾಡಲು ರಾಜ್ಯಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡಿ. 3 ತಿಂಗಳವರೆಗೆ ವಿಶೇಷ ಕೋವಿಡ್ ಗ್ರ್ಯಾಂಟ್ ನೀಡಿ. ಹಣಕಾಸು ಆಯೋಗದ ಶಿಫಾರಸು ಪರಿಶೀಲಿಸಿ ಎಂದು 3 ಅಂಶಗಳನ್ನು ಒಳಗೊಂಡ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಬರೆದಿದ್ದಾರೆ. ಹಾಗೆಯೇ ಈ ಅಂಶಗಳ ಬಗ್ಗೆ ಗಮನ ಸೆಳೆಯುವಂತೆ ಎಲ್ಲಾ ರಾಜ್ಯಗಳ ಸಿಎಂಗಳಿಗೂ ಅಮರೀಂದರ್ ಸಿಂಗ್ ಅವರು ಪತ್ರ ಬರೆದಿದ್ದಾರೆ.