‘ಜಮೀರ್ ಮತಾಂಧ, ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು ಹೊಡೀಬೇಕು’ – ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ
ದಾವಣಗೆರೆ(ಏ.21): ಜಮೀರ್ ಅಹಮ್ಮದ್ ಓರ್ವ ಮತಾಂಧ, ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು ಹೊಡೀಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಎಂ.ಪಿ ರೇಣುಕಾಚಾರ್ಯ, ಜಮೀರ್ ಅಹಮ್ಮದ್ ಮತ್ತು ಯುಟಿ ಖಾದರ್ ಮತಾಂಧರು. ಇಬ್ಬರನ್ನು ಗೂಂಡಾಕಾಯ್ದೆಯಡಿ ಬಂಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಜಮೀರ್ ಅಹಮ್ಮದ್ ಪದೇಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾದರಾಯನಪುರ ಗಲಭೆ ವಿಚಾರದಲ್ಲಿ ಜಮೀರ್ ಒಮ್ಮೊಮ್ಮೆ ಒಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ತಪ್ಪಿತಸ್ಥರನ್ನು ಯಾವಾಗಲು ಸಮರ್ಥಿಸಿಕೊಳ್ಳುವುದುದೇ ಈತನ ಕಾರ್ಯವಾಗಿದೆ. ಹಾಗಾಗಿ ಜಮೀರ್ ಮೇಲೆ ಗೂಂಡಾ ಕೇಸ್ ಹಾಕಿ ಬಂಧಿಸಬೇಕು ಎಂದು ಪುನರುಚ್ಚರಿಸಿದ್ದಾರೆ ಎಂ.ಪಿ ರೇಣುಕಾಚಾರ್ಯರು.
ಈ ಹಿಂದೆ ಸಾರಾಯಿಪಾಳ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಕೊರೋನಾ ಸೋಂಕಿತರು ವೈದ್ಯಕೀಯ ಚಿಕಿತ್ಸೆಗೆ ಸಹಕರಿಸಬೇಕು. ಇಲ್ಲದೇ ಹೋದಲ್ಲಿ ನಿಮ್ಮಿಂದ ಇಡೀ ಸಮುದಾಯಕ್ಕೆ ಸೋಂಕು ಹರಡಲಿದೆ. ಯಾರಾದರೂ ಚಿಕಿತ್ಸೆಗೆ ನಕಾರ ಮಾಡಿದರೇ ಗುಂಡು ಹೊಡೀರಿ ಎಂದು ನಾನು ಹೇಳಿದ್ದೆ. ಈಗ ಅದು ನಿಜವಾಗುತ್ತಿದೆ ಎಂದರು.
ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಕರೆದುಕೊಂಡು ಹೋಗುತ್ತಿದ್ದಾಗ ಗಲಾಟೆ ನಡೆದಿತ್ತು. ಈ ಪ್ರಕರಣ ಸಂಬಂಧ ಐವರು ಪ್ರಮುಖ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಾದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ನಿನ್ನೆಯೇ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ, ಐವರು ಅಪ್ರಾಪ್ತರನ್ನು ಬಾಲ ಮಂದಿರಕ್ಕೆ ಶಿಫ್ಟ್ ಮಾಡಿ ಎಂದು ನ್ಯಾಯಲಯ ಆದೇಶಿಸಿತ್ತು. ಜತೆಗೆ 50 ಜನ ಆರೋಪಿಗಳು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಸಿ ಎಂದು ಕೋರ್ಟ್ ಸೂಚನೆ ನೀಡಿತ್ತು.
ಹೀಗೆ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ವಶದಲ್ಲಿರುವ ನಾಲ್ವರ ಪೈಕಿ ಫರ್ಜುವಾ ಹೆಸರಿನ ಆರೋಪಿ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದಾರಂತೆ. ಹೀಗಾಗಿ ಪೊಲೀಸರಿಗೆ ಫರ್ಜುವಾ ವಿಚಾರಣೆ ತಲೆನೋವಾಗಿದೆ. ಫರ್ಜುವಾ ಜೊತೆಗೆ ಕಬೀರ್, ಇರ್ಷಾದ್ ಅಹ್ಮದ್, ಹರ್ಷದ್ ಹೆಸರಿನ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
ಪಾದರಾಯನಪುರವೂ ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದ ಶಾಸಕ ಜಮೀರ್ ಅಹಮ್ಮದ್. ಹಾಗಾಗಿ ಈ ಗಲಭೆ ಹಿಂದೆ ಇವರ ಕೈವಾಡ ಇರಬಹುದು ಎಂದು ಕೆಲವರು ಆರೋಪಿಸುತ್ತಿದ್ದಾರೆ.