ಕೊರೋನಾ ನಿಮ್ಮ ಧರ್ಮ ಮತ್ತು ಜಾತಿ ಕೇಳಿ ಬರೋದಿಲ್ಲ: ಪಾದರಾಯನಪುರ ಗಲಭೆಗೆ ಸಂಸದ ತೇಜಸ್ವಿ ಸೂರ್ಯ ಖಂಡನೆ
ಬೆಂಗಳೂರು(ಏ.20): ಭಾನುವಾರ ಪಾದರಾಯನಪುರದಲ್ಲಿ ನಡೆದ ಘಟನೆ ಖಂಡನೀಯ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಜನ ಪಾದರಾಯನಪುರದಲ್ಲಿ ಇದ್ದಾರೆ. ಇದನ್ನು ತಪಾಸಣೆ ಮಾಡುತ್ತಿದ್ದಾಗ ಹೀಗೆ ನಡೆದಿದೆ ಎಂದರು.
ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದವರಿಂದಲೇ ರಾಜ್ಯದಲ್ಲಿ ಶೇ.30ರಷ್ಟು ಕೊರೋನಾ ಪಾಸಿಟಿವ್ ಪ್ರಕರಣಗಳು ಬಂದಿರುವುದು. ಹೀಗಾಗಿ ಇಲ್ಲಿನ ಪಾದರಾಯನಪುರದಲ್ಲಿ ಯಾರಿದ್ದಾರೋ ಎಂದು ಪೊಲೀಸರು ನೋಡಲು ಹೋದಾಗ ಹೀಗಾಗಿದೆ. ಇದರ ಹಿಂದೆ ಯಾರೇ ಇರಲಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ತೇಜಸ್ವಿ ಸೂರ್ಯ ಮನವಿ ಮಾಡಿದರು.
ಕೊರೋನಾ ವೈರಸ್ ಯಾವುದೇ ಜಾತಿ, ಧರ್ಮಕ್ಕೆ ಬರುವ ಖಾಯಿಲೇ ಅಲ್ಲ. ಒಂದು ತಿಂಗಳಿಂದ ಲಾಕ್ಡೌನ್ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಮನೆಗೂ ಹೋಗಿ ಮನವಿ ಮಾಡಲು ಸಾಧ್ಯವಿಲ್ಲ. ಆದರೂ, ಕ್ಷೇತ್ರದಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಕೆಲಸ ಶಾಸಕ ಜಮೀರ್ ಅಹಮ್ಮದ್ ಮಾಡಲಿ ಎಂದು ಕೇಳಿಕೊಂಡರು.
ಭಾನುವಾರ ರಾತ್ರಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಕರೆದುಕೊಂಡು ಹೋಗುತ್ತಿದ್ದಾಗ ನಡೆದ ಗಲಾಟೆ ನಡೆದಿದೆ. ಈ ಪ್ರಕರಣ ಸಂಬಂಧ ಐದು ಎಫ್‌ಐಆರ್ ದಾಖಲಾಗಿದೆ. ನಾವು ಲಾಠಿಯನ್ನು ತ್ಯಾಗ ಮಾಡಿಲ್ಲ. ಆದರೀಗ ಬಳಸುತ್ತಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಬಳಸುತ್ತೇವೆ. ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಹೇಳಿದ್ದಾರೆ.