EBM News Kannada
Leading News Portal in Kannada

ಮತ್ತೆ ಮಳೆ ಆರ್ಭಟ; ಚಿಕ್ಕಮಗಳೂರಲ್ಲಿ ಮೂವರ ಸಾವು; ಹಾವೇರಿ, ಗದಗ ಮೊದಲಾದೆಡೆ ಬೆಳೆ ನಾಶ

0

ಬೆಂಗಳೂರು(ಏ. 19): ಕೊರೋನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಮಳೆಗಾಳಿ ಆರ್ಭಟ ಮುಂದುವರಿದಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಹಲವೆಡೆ ರೈತರ ಬೆಳೆಗಳು ನಾಶಗೊಂಡಿವೆ. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅರೆಮಲೆನಾಡು ಚಿಕ್ಕಮಗಳೂರಿನಲ್ಲೂ ಭೀಕರ ಮಳೆಗಾಳಿ ಆಗಿದೆ.

ಚಿಕ್ಕಮಗಳೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕೂಲಿ ಕಾರ್ಮಿಕರು ಸಾವನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿಯಲ್ಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೃತರು ತಮಿಳುನಾಡು ಮೂಲದ ತೋಟದ ಕಾರ್ಮಿಕರಾದ ಜ್ಯೋತಿ (28), ಮಾದಮ್ಮ(65), ಮಾರಿ (27). ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಸಂಬಂಧಿ ಎಂದು ತಿಳಿದು ಬಂದಿದೆ.

ತಮಿಳುನಾಡು ರಾಜ್ಯದ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನವರಾಗಿದ್ದು ಕಳೆದ ಕೆಲ ತಿಂಗಳ ಹಿಂದೆ ಒಂದೇ ಕುಟುಂಬಕ್ಕೆ ಸೇರಿದ 14 ಕಾರ್ಮಿಕರು ಚಿಕ್ಕಮಗಳೂರಿನ ಕಾಫಿತೋಟದಲ್ಲಿ ಕಾಫಿ ಕಟಾವು ಕೆಲಸಕ್ಕೆಂದು ವಲಸೆ ಬಂದಿದ್ದರು. ಕಳಸ ಪಟ್ಟಣದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗಜೇಂದ್ರ ಅವರ ಕಾಫಿತೋಟದಲ್ಲಿ ಕೆಲ ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ಲಾಕ್​ಡೌನ್​ನಿಂದಾಗಿ ತಮ್ಮ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತೋಟದ ಕೂಲಿ ಲೈನ್ ಮನೆಯಲ್ಲಿ ವಾಸವಾಗಿದ್ರು.

ಇದನ್ನೂ ಓದಿ: ಯಾದಗಿರಿ ರೈತರ ಗಾಯಕ್ಕೆ ಬರೆ ಎಳೆದ ಬಿರುಗಾಳಿ ಸಹಿತ ಮಳೆ; ಭತ್ತದ ಬೆಳೆ ಸಂಪೂರ್ಣ ನಾಶ

ಶನಿವಾರ ಸಂಜೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಸಿಡಿಲು ಗಾಳಿ ಸಹಿತ ಬಾರೀ ಮಳೆಯಾಗಿದ್ದು, ಈ ವೇಳೆ ಹಿತ್ಲುಮಕ್ಕಿ ಗ್ರಾಮದ ಲೈನ್ ಮನೆಗಳ ಮುಂದೆ ನಿಂತಿದ್ದ ಮೂವರು ಮಹಿಳೆಯರಿಗೆ ಸಿಡಿಲು ಬಡಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರನ್ನು ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮೂವರೂ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನು ತರೀಕೆರೆಯಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಮಳೆಯ ಆರ್ಭಟಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

ಅತ್ತ, ಉತ್ತರ ಕರ್ನಾಟಕದ ಯಾದಗಿರಿ, ಗದಗ, ವಿಜಯಪುರ, ಹಾವೇರಿ, ಧಾರವಾಡ ಮೊದಲಾದೆಡೆಯೂ ಭಾರೀ ಮಳೆಯಾಗಿದೆ. ಹಾಗೇ ರೈತರ ಹಲವು ಬೆಳೆಗಳು ಸಂಪೂರ್ಣ ನಾಶಗೊಂಡಿವೆ.

ಹಾವೇರಿಯಲ್ಲಂತೂ ಶಿಗ್ಗಾಂವಿಯ ಸಂತೋಷ್ ಎಂಬುವವರು ತಮ್ಮ 17 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವು ಅರ್ಧಕರ್ಧ ನಾಶವಾಗಿದೆ. ಬಿರುಗಾಳಿಯಿಂದಾಗಿ ಅರ್ಧಭಾಗದಷ್ಟು ಹಣ್ಣುಗಳು ಮಣ್ಣುಪಾಲಾಗಿವೆ. ಆಲಿಕಲ್ಲು ಬಿದ್ದು ಗಿಡದ ಮೇಲಿರುವ ಹಣ್ಣುಗಳೂ ಕೊಳೆತುಹೋಗುತ್ತಿವೆ. 20ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ. ರೈತ ಸಂತೋಷ್ ದಿಕ್ಕೆಟ್ಟು ಕೂತಿದ್ದಾರೆ.ಗದಗ್ ಜಿಲ್ಲೆಯ ಹಲವೆಡೆ ಬಾಳೆತೋಟಗಳು ನೆಲಕಚ್ಚಿವೆ. ಮೊನ್ನೆ ಕೂಡ ವಿಜಯಪುರ, ಗದಗ ಮೊದಲಾದೆಡೆ ಬಿದ್ದ ಭಾರೀ ಮಳೆಗೆ ಹಲವು ಎಕರೆಗಳಷ್ಟು ಬಾಳೆಗಿಡಗಳು ನೆಲಕಚ್ಚಿದ್ದವು. ಸಿಡಿಲಿಗೆ 3 ಹಸುಗಳು ಸತ್ತಿದ್ದವು.

Leave A Reply

Your email address will not be published.