ಜಾತ್ರೆಯಲ್ಲಿಯೂ ಜನ–ಅಂತಿಮ ಯಾತ್ರೆಯಲ್ಲಿಯೂ ಜನ; ಕಲಬುರ್ಗಿಯಲ್ಲಿ ಲಾಕ್‌ಡೌನ್‌ಗಿಲ್ಲ ಕಿಮ್ಮತ್ತು!
ಕಲಬುರ್ಗಿ (ಏಪ್ರಿಲ್ 19); ಕೊರೋನಾ ನಿಷೇಧಾಜ್ಞೆಯ ನಡುವೆಯೂ ಜಿಲ್ಲೆಯಲ್ಲಿ ಜಾತ್ರೆ ಮಾಡಿದ್ದಾಯಿತು. ಈಗ ಗುಂಪು ಗುಂಪಾಗಿ ಹೋಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗೋ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿರುವ ಘಟನೆಗೆ ಮತ್ತೆ ಕಲಬುರ್ಗಿ ಸಾಕ್ಷಿಯಾಗಿದೆ.
ಕೆಂಚಬಸವೇಶ್ವರ ರುದ್ರಭೂಮಿಯಲ್ಲಿ ಇಂದು ರಾಮ್ ಗೌಳಿ ಎಂಬಾತನ ಅಂತ್ಯಕ್ರಿಯೆ ನೆವೇರಿಸಲಾಯಿತು. ಆದರೆ, ಲಾಕ್ ಡೌನ್ ಇದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದೆ ನೂರಾರು ಜನ ಗುಂಪು ಗುಂಪಾಗಿ ಭಾಗಿಯಾಗಿರೋದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಲಾಗಿದೆ.
ಲಾಕ್ ಡೌನ್ ಕಾರಣದಿಂದಾಗಿ ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರಭಾಗವಹಿಸಲು ಅವಕಾಶವಿದೆ. ಅದೂ ಸಹ ಸಾಮಾಜಿಕ ಅಂತರ ಕಾಪಾಡಬೇಕೆಂಬ ಕಂಡೀಷನ್ ಹಾಕಲಾಗಿರುತ್ತದೆ. ಇದರೆ ಇಲ್ಲಿ ನೂರಾರು ಜನ ಭಾಗಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಲಬುರ್ಗಿ ಪೊಲೀಸ್ ಕಮೀಷನರ್ ಸತೀಶ್ ಕುಮಾರ್, ಸುಮಾರು 70 ಜನ ಭಾಗಿಯಾಗಿದ್ದರು ಎಂಬ ಮಾಹಿತಿ ಬಂದಿದೆ. ಹಲವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಪ್ರಕರಣದ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಏಪ್ರಿಲ್ 15 ರಂದು ಆಳಂದದ ಭೂಸನೂರು ಗ್ರಾಮದಲ್ಲಿ ನೂರಾರು ಜನರ ನೇತೃತ್ವದಲ್ಲಿ ಹನುಮಾನ ಜಾತ್ರೆ ನಡೆದಿತ್ತು. ಏಪ್ರಿಲ್ 16 ರಂದು ಚಿತ್ತಾಪುರದ ರಾವೂರು ಗ್ರಾಮದಲ್ಲಿ ನೂರಾರು ಜನರ ನೇತೃತ್ವದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆ ನಡೆದಿತ್ತು. ಇದರ ಬೆನ್ನ ಹಿಂದೆಯೇ ಕಲಬುರ್ಗಿಯಲ್ಲಿ ನಡೆದ ಅಂತ್ಯಕ್ರಿಯೆಯೊಂದರಲ್ಲಿ ನೂರಾರು ಜನ ಭಾಗಿಯಾಗಿದ್ದು, ಲಾಕ್ ಡೌನ್ ಜಾರಿಗೆ ಅರ್ಥವೇ ಇಲ್ಲ ಎನ್ನುವಂತಾಗಿದೆ. ಈಗಲಾದರೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.