ಲಾಕ್ ಡೌನ್ ಪರಿಹಾರ ಅಲ್ಲ; ಕೊರೋನಾ ಹಿಮ್ಮೆಟ್ಟಿಸಲು ವ್ಯಾಪಕ ಪರೀಕ್ಷೆಗಳೇ ಸರಿ: ರಾಹುಲ್ ಗಾಂಧಿ
ನವದೆಹಲಿ(ಏ. 16): ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಅವಧಿ ಮೇ 3ರವರೆಗೆ ವಿಸ್ತರಣೆ ಆಗಿದೆ. ಇದರಿಂದ ಆರ್ಥಿಕತೆ ಇನ್ನಷ್ಟು ಅಧಃಪತನವಾಗುವುದರ ಜೊತೆಗೆ ಜನಜೀವನ ತಲ್ಲಣಗೊಂಡಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಅನಿವಾರ್ಯ ಎಂದು ಸರ್ಕಾರ ಹೇಳುತ್ತಿದೆ. ಇದೇ ವೇಳೆ, ರಾಹುಲ್ ಗಾಂಧಿ ಅವರು ಕೊರೋನಾ ಪತ್ತೆ ಪರೀಕ್ಷೆ ವ್ಯಾಪಕವಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೊರೋನಾ ವೈರಸ್ ನಿಗ್ರಹಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಲಾಕ್ ಡೌನ್ಗಿಂತ ಹೆಚ್ಚಾಗಿ ಸರ್ಕಾರವು ತೀವ್ರಮಟ್ಟದಲ್ಲಿ ಪರೀಕ್ಷೆಗಳನ್ನ ನಡೆಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ.
“ಲಾಕ್ಡೌನ್ ಎಂಬುದು ಪೌಸ್ (ವಿರಾಮ) ಬಟನ್ ಇದ್ದಹಾಗೆ. ಲಾಕ್ ಡೌನ್ ತೆರವುಗೊಳಿಸಿದ ನಂತರ ವೈರಸ್ ಸೋಂಕು ಹರಡಲು ಪ್ರಾರಂಭವಾಗುತ್ತದೆ. ಲಾಕ್ಡೌನ್ನಿಂದ ವೈರಸ್ ನಿಗ್ರಹಿಸಲು ಸಾಧ್ಯವೇ ಇಲ್ಲ. ಕೆಲ ಅವಧಿಯವರೆಗೆ ಮಾತ್ರ ಅದನ್ನು ತಡೆಯಬಹುದಷ್ಟೇ. ಅದನ್ನು ಹೋಗಲಾಡಿಸಬೇಕಾದರೆ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕು. ವೈರಸ್ ಸೋಂಕು ಎಲ್ಲೆಲ್ಲಿ ಇದೆ ಎಂದು ಹುಡುಕಿ ಹುಡುಕಿ ನಿವಾರಿಸಬೇಕು. ಪರೀಕ್ಷೆಗಳಿಗೆ ಒತ್ತು ಕೊಡಿ ಎಂಬುದು ಸರ್ಕಾರಕ್ಕೆ ನನ್ನ ಸಲಹೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಚೀನಾದಿಂದ ಭಾರತಕ್ಕೆ 6.5 ಲಕ್ಷ ರಾಪಿಡ್ ಟೆಸ್ಟಿಂಗ್ ಕಿಟ್‌ಗಳ ಆಮದು; ಕಳಪೆ ಗುಣಮಟ್ಟದ ಆರೋಪ
ವೈರಸ್ ಎಲ್ಲೆಲ್ಲಿಗೆ ಹರಡುತ್ತಿದೆ ಎಂದು ಮೊದಲೇ ಅಂದಾಜು ಮಾಡಿ ಸಿದ್ದರಿರಬೇಕು ಎಂದೂ ಮಾಜಿ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ಧಾರೆ. “ನೀವು ವೈರಸ್ ಜೊತೆ ಹೋರಾಟ ಮಾಡುತ್ತೀದ್ದೆರೆಂದರೆ ಪರೀಕ್ಷೆಗಳನ್ನ ಹೆಚ್ಚಿಸಲೇಬೇಕು. ವೈರಸ್ಗಿಂತಲೂ ಚುರುಕಾಗಿ ನಾವು ಪರೀಕ್ಷೆ ನಡೆಸಬೇಕು. ವೈರಸ್ ಎಲ್ಲಿ ಹರಡುತ್ತಿದೆ ಎಂಬುದನ್ನು ಅಂದಾಜು ಮಾಡಲು ಅಲ್ಲಲ್ಲಿ ಪರೀಕ್ಷೆಗಳನ್ನ ಮಾಡುವ ಅಗತ್ಯ ಇದೆ.
”ಕೋವಿಡ್-19 ವಿರುದ್ಧ ಇರುವ ಪ್ರಬಲ ಅಸ್ತ್ರವೆಂದರೆ ಟೆಸ್ಟಿಂಗ್. ವೈರಸ್ ಎಲ್ಲಿ ಹರಡುತ್ತಿದೆ ಎಂದು ಪತ್ತೆ ಹಚ್ಚುವಷ್ಟು ವ್ಯಾಪಕ ಮಟ್ಟದಲ್ಲಿ ಪರೀಕ್ಷೆಗಳಾಗಬೇಕು. ಈ ಮೂಲಕ ವೈರಸ್ ಅನ್ನು ಪ್ರತ್ಯೇಕಿಸಿ ನಾಶ ಮಾಡಬೇಕು. ಪ್ರತಿ 10 ಲಕ್ಷ ಮಂದಿಗೆ ನಾವು ನಡೆಸುತ್ತಿರುವ ಪರೀಕ್ಷೆಗಳ ಸಂಖ್ಯೆ 199 ಮಾತ್ರ ಇದೆ. ಕಳೆದ 72 ದಿನದಲ್ಲಿ ನಾವು ನಡೆಸಿರುವ ಎಲ್ಲಾ ಪರೀಕ್ಷೆಗಳನ್ನ ಲೆಕ್ಕ ಹಾಕಿದರೆ ಪ್ರತೀ ಜಿಲ್ಲೆಗೆ ಸರಾಸರಿ 350 ಟೆಸ್ಟ್ ಆದಂತಾಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: COVID-19: ಸಾವಿನ ದವಡೆಯಿಂದ ಪಾರಾದ 106 ವರ್ಷದ ಬ್ರಿಟನ್ ಮಹಿಳೆ; ಆಕೆಯ ಆರೋಗ್ಯ ಗುಟ್ಟೇನು?“ಆಕ್ರಮಣಕಾರಿಯಾಗಷ್ಟೇ ಅಲ್ಲ ಬುದ್ಧಿವಂತಿಕೆಯಿಂದ ಪರೀಕ್ಷೆಗಳನ್ನ ನಡೆಸಬೇಕು. ರೋಗಿಗಳನ್ನ ಪತ್ತೆ ಹಚ್ಚಲಷ್ಟೇ ಅಲ್ಲ, ವೈರಸ್ ಎಲ್ಲೆಲ್ಲಿ ಚಲಿಸುತ್ತಿದೆ ಎಂದು ಒಂದು ನಕ್ಷೆ ಮಾಡುವ ರೀತಿಯಲ್ಲಿ ಪರೀಕ್ಷೆಗಳಾಗಬೇಕು” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಕೈ ಬಲಪಡಿಸಬೇಕು. ವಲಸಿಗ ಕಾರ್ಮಿಕರ ಸಮಸ್ಯೆ ಬಹಳ ಗಂಭೀರವಾದುದು. ದೇಶದಲ್ಲಿ ಸಾಮಾಜಿಕ ವಿಪ್ಲವ ಜರುಗಲು ಆಸ್ಪದ ಕೊಡದಂತೆ ಈ ಸಮಸ್ಯೆ ಬಗೆಹರಿಸಬೇಕು ಎಂದೂ ರಾಹುಲ್ ಒತ್ತಾಯಿಸಿದ್ದಾರೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಷ್ಟೋ ವಿಚಾರಗಳಲ್ಲಿ ಅಭಿಪ್ರಾಯ ಭೇದ ಇದ್ದರೂ ಎಲ್ಲಾ ಪಕ್ಷಗಳು ಕೋವಿಡ್-19 ವಿರುದ್ಧ ಹೋರಾಡಲು ಸರ್ಕಾರ ಜೊತೆ ಕೈಜೋಡಿಸಬೇಕು ಎಂದೂ ಕರೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಭಾರತದಲ್ಲಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 10,477 ಇದೆ. ಒಟ್ಟು 414 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ 1 ಸಾವಿರ ದಾಟಿ ಹೋಗಿದೆ.