ಮುಸ್ಲಿಮರಿಂದ ಕೊರೋನಾ ಬಂತು ಅನ್ನೋದು ತಪ್ಪು; ನಮಗೂ ತಬ್ಲಿಘಿ ಜಮಾತ್ಗೂ ಸಂಬಂಧವೇ ಇಲ್ಲ – ಮೊಹಮ್ಮದ್ ಯೂಸುಫ್
ಬೆಂಗಳೂರು(ಏ.16): ದೇಶದಲ್ಲಿ ಮುಸ್ಲಿಮರಿಂದಲೇ ಕೊರೋನಾ ವೈರಸ್ ಸೋಂಕು ಬಂತು ಅನ್ನೋದು ತಪ್ಪು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೊರೋನಾ ಸೋಂಕು ಬಂದವರ ಪೈಕಿ ಹಿಂದೂ, ಮುಸ್ಲಿಂ, ಕ್ರೈಸ್ತರು ಇದ್ದಾರೆ. ಹಾಗಾಗಿ ಕೇವಲ ಮುಸ್ಲಿಮರತ್ತ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದಿದ್ದಾರೆ.
ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ. 2015ರಲ್ಲೇ ತಬ್ಲಿಘಿ ಜಮಾತ್ ಮತ್ತು ಸುಲ್ತಾನ್ ಷಾ ಬೇರೆಯಾಗಿದೆ. ಹಾಗಾಗಿ ನಮಗೂ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನೀವು ಎಲ್ಲದಕ್ಕೂ ಅಲ್ಪಸಂಖ್ಯಾತರೇ ಕಾರಣ ಎಂದು ಹೇಳುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ ಮೊಹಮ್ಮದ್ ಯೂಸುಫ್.
ಕರ್ನಾಟಕದಲ್ಲಿ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಹೋದವರು ಕೇವಲ 10ರಿಂದ 12 ಮಂದಿ ಮಾತ್ರ. ಈ ಕಾರ್ಯಕ್ರಮಕ್ಕೆ ಎಲ್ಲಾ ಮುಸ್ಲಿಮರು ಹೋಗಿರಲಿಲ್ಲ. ಕೇವಲ ಬಾಗಲಕೋಟೆ, ಚಿಕ್ಕಬಳ್ಳಾಪುರ, ಬಿಜಾಪುರ ಕೆಲವು ಕಡೆಗಳಿಂದ ಹೋಗಿದ್ದರು ಎಂದರು. ಸರ್ಕಾರ 698 ಜನ ಹೋಗಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಯೂಸುಫ್ ಈ ಅಂಕಿ ಅಂಶವೇ ತಪ್ಪು ಎಂದು ಹೇಳಿದರು.
ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮಾ. 13ರಿಂದ 15ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಮೊದಲಿಗೆ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಸಾವನ್ನಪ್ಪಿದ್ದರು. ಆದರೀಗ ಮತ್ತಷ್ಟು ಜನ ಈ ಧಾರ್ಮಿಕ ಸಭೆಗೆ ಹೋದವರು ಸಾವನ್ನಪ್ಪುತ್ತಿರುವ ಪರಿಣಾಮ ದೇಶದಲ್ಲಿ ಕೊರೋನಾ ಭೀತಿ ಇನ್ನಷ್ಟು ಹೆಚ್ಚಾಗಿದೆ.
ಒಂದು ತಿಂಗಳ ಹಿಂದೆ ದೆಹಲಿಯ ನಿಜಾಮುದ್ದೀನ್ನ ಮಸೀದಿಯಲ್ಲಿ ನಡೆದ ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.