ಕೊರೋನಾ ಕೊನೆಗಾಣಿಸಲು 2022ರವರೆಗೂ ಆಗಾಗ ಲಾಕ್‌ಡೌನ್ ಮಾಡುತ್ತಲೇ ಇರಬೇಕು!
ನವದೆಹಲಿ: ಕೊರೋನಾವನ್ನು ಮಹಾಮಾರಿ, ಜಾಗತಿಕ ಪಿಡುಗು, ಮೂರನೇ ಮಹಾಯುದ್ಧ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತಿದೆ. ತಂತ್ರಜ್ಞಾನ, ವೈದ್ಯಕೀಯ, ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲಗಳೆಲ್ಲವನ್ನೂ ಹೇರಳವಾಗಿ ಹೊಂದಿರುವ ದೊಡ್ಡ ದೊಡ್ಡ ದೇಶಗಳು ಕೂಡ ಕೊರೋನಾ ಹೆಸರು ಕೇಳಿ ಬೆಚ್ಚಿ ಬೀಳುತ್ತಿವೆ. ಕೊರೋನಾದಿಂದ ಇಡೀ ಜಗತ್ತು ಸ್ಥಬ್ದವಾಗಿದೆ. ಇಂಥದ್ದರ ನಡುವೆ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಸದ್ಯ ಮಾಡಲಾಗುತ್ತಿರುವ ಲಾಕ್‌ಡೌನ್, ಸೀಲ್ ಡೌನ್ ಗಳು ಏನೇನೂ ಸಾಲದು, 2022ರವರೆಗೂ ಆಗಾಗ ಲಾಕ್‌ಡೌನ್ ಮಾಡುತ್ತಲೇ ಇರಬೇಕೆಂದು!
ಕೇಳಲು ಕಷ್ಟವಾಗುತ್ತಿದೆ ಅಲ್ಲವೆ? ನಂಬಲು ಸಾಧ್ಯವಾಗುತ್ತಿಲ್ಲ ಅಲ್ಲವೇ? ಆದರೆ ಇಂಥದೊಂದು ನಿಜ ಅರ್ಥದ ಭಯಂಕರ ಮಾಹಿತಿ ಇರುವುದು ದಿಟ. ಹಾರ್ವರ್ಡ್ ವಿಜ್ಞಾನಿಗಳು ‘2022ರವರೆಗೂ ಪದೇ ಪದೇ ಲಾಕ್‌ಡೌನ್ ಮಾಡಲೇಬೇಕು, ಆಗ ಮಾತ್ರ ಕೊರೋನಾ ಸೋಂಕು ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ’ ಎಂದು ಹೇಳಿದ್ದಾರೆ. ಇದೇ ಹಾರ್ವರ್ಡ್ ವಿಜ್ಞಾನಿಗಳು ಕೊರೋನಾ ಎಂಬ ಸಾಂಕ್ರಾಮಿಕ ರೋಗ ಹೇಗಿರುತ್ತದೆ ಎಂದು ಅನ್ವೇಷಿಸಿದವರು, ಅದರ ಪಥ ಗುರುತಿಸಿದವರು. ಹಾಗಾಗಿ ಅವರ ಹೇಳಿಕೆಗೆ ಹೆಚ್ಚು ಮಹತ್ವ ಬಂದಿದೆ.
ಸೈನ್ಸ್ ಜರ್ನಲ್ ಪತ್ರಿಕೆಯಲ್ಲಿ ಮಂಗಳವಾರ ಅಭಿಪ್ರಾಯ ಹಂಚಿಕೊಂಡಿರುವ ಹಾರ್ವರ್ಡ್ ವಿಜ್ಞಾನಿಗಳು, ಒಮ್ಮೆ ಲಾಕ್‌ಡೌನ್ ಮಾಡಿದ ಮಾತ್ರಕ್ಕೆ ಕೊರೋನಾವನ್ನು ಕೊನೆಗಾಣಿಸುವ ಉದ್ದೇಶ ಈಡೇರುವುದಿಲ್ಲ. ಆದುದರಿಂದ 2022ರವರೆಗೂ ಲಾಕ್‌ಡೌನ್ ಅನ್ನು ಪುನರಾವರ್ತನೆ ಮಾಡುತ್ತಲೇ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.