ಔಷಧಿ ಆಮದು: ಕೊರೋನಾ ಬಳಿಕ ಭಾರತದಿಂದ ಚೀನಾಗೆ ತೆರಳಿದ ಮೊದಲ ವಿಮಾನ ಸ್ಪೇಸ್ ಜೆಟ್!
ನವದೆಹಲಿ(ಏ.15): ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಈ ಮಾರಕ ಕೋವಿಡ್-19 ತಡೆಗೆ ಭಾರತ ಸರ್ಕಾರವೂ ಭಾರೀ ಕಸರತ್ತು ನಡೆಸುತ್ತಿದೆ. ಹಾಗಾಗಿಯೇ ಇಂದು ಚೀನಾದಿಂದ ಔಷಧಿ ಆಮದು ಮಾಡಿಕೊಳ್ಳಲು ಭಾರತದಿಂದ ಸ್ಪೇಸ್ ಜೆಟ್ ವಿಮಾನ ಪ್ರಯಾಣ ಬೆಳೆಸಿದೆ. ಕೊರೋನಾ ನಂತರ ಭಾರತದ ಕೋಲ್ಕತ್ತಾದ ಮೂಲಕ ಚೀನಾದ ಶಾಂಘೈಗೆ ತೆರಳಿದ ಮೊದಲ ವಿಮಾನ ಇದಾಗಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಕೋಲ್ಕತ್ತಾದಿಂದ ತೆರಳಿದ ವಿಮಾನ ಮಧ್ಯಾಹ್ನ 3 ಗಂಟೆ ಚೀನಾದ ಶಾಂಘೈಗೆ ತಲುಪಿದೆ ಎಂದು ತಿಳಿದು ಬಂದಿದೆ.
ಇತ್ತ ಭಾರತ, ಅತ್ತ ಚೀನಾದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ಏರುತ್ತಲೇ ಇದೆ. ಆದ್ದರಿಂದಲೇ ದೇಶದಲ್ಲಿ ವೈದ್ಯಕೀಯ ಸಲಕರಣೆಗಳ ಮೇಲೆ ಹಾಗೂ ಔಷಧಿ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಉಪಯೋಗಿಸುವ ಪ್ಯಾರಾಸೆಟಮೊಲ್ ಔಷಧಿಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡಿದೆ. ಪ್ಯಾರಾಸೆಟಮೊಲ್ ಯುಕ್ತ ಮಾತ್ರೆಗಳ ಮೇಲಿನ ದರ ಶೇ.40 ರಷ್ಟು ಏರಿಕೆಯಾಗಿರುವುದಾಗಿ ವರದಿಯಾಗಿದೆ.
ಕೊರೋನಾದಿಂದ ಚೀನಾದಲ್ಲಿ ಉತ್ಪಾದನಾ ವಲಯದ ಮೇಲೂ ಭಾರೀ ಋಣಾತ್ಮಕ ಪರಿಣಾಮ ಬೀರಿದೆ. ಅಲ್ಲಿಯ ಕಾರ್ಖಾನೆಗಳ ಉತ್ಪಾದನೆಯಲ್ಲಿ ಕುಸಿತ ಕಂಡಿದ್ದು, ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಭಾರತದ ಔಷಧ ಉತ್ಪಾದನಾ ವಲಯ ಕಚ್ಚಾ ವಸ್ತುಗಳಿಗಾಗಿ ಅತಿ ಹೆಚ್ಚು ಚೀನಾವನ್ನೇ ಅವಲಂಬಿಸಿದೆ. ಚೀನಾದಲ್ಲಿ ಸದ್ಯ ಕಾರ್ಖಾನೆಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಶೇಕಡಾ 80 ರಷ್ಟು ಕಚ್ಚಾ ವಸ್ತುಗಳು ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.