Coronavirus In Mandya: ಮಂಡ್ಯದಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್; ಸೋಂಕಿತರಿಗೆ ತಬ್ಲಿಗಿ ನಂಟು, ಆಂತಕದಲ್ಲಿ ಜನ ಸಾಮಾನ್ಯರು
ಮಂಡ್ಯ (ಏಪ್ರಿಲ್ 13); ತಬ್ಲಿಗಿ ಜಮಾತ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಮಳವಳ್ಳಿಯ ಇನ್ನೂ ಮೂವರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, “ತಬ್ಲಿಗಿ ಜಮಾತ್ ಜೊತೆ ನಿಕಟ ಸಂಪರ್ಕ ಹೊಂದಿದ ಮೂವರಿಗೆ ಇಂದು ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಮೂಲಕ ಮಂಡ್ಯದಲ್ಲಿ ಒಟ್ಟು 65 ಜನರನ್ನು ಪರೀಕ್ಷೆ ಮಾಡಲಾಗಿದ್ದು 8 ಜನರಿಗೆ ಪಾಸಿಟಿವ್ ಪತ್ತೆಯಾಗಿದೆ. ಎಲ್ಲರನ್ನೂ ಪತ್ಯೇಕವಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸಾರ್ವಜನಿಕರು ಭಯ ಪಡುವ ಅಗತ್ಯ ಇಲ್ಲ” ಎಂದು ತಿಳಿಸಿದ್ದಾರೆ.
“ಇಂದು ಪಾಸಿಟಿವ್ ಬಂದಂತಹ ಮೂರು ಪ್ರಕರಣಗಳು P237, P238, P239 ಹಾಗೂ P179 ರವರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಹೀಗಾಗಿ ಇವರನ್ನು ಏಪ್ರಿಲ್.04ರಂದೇ ಗುರುತಿಸಿ ಐಸೊಲೇಶನ್ ಮಾಡಲಾಗಿತ್ತು. ಪಾಸಿಟಿವ್ ಬಂದ ಮೇಲೆ ಮಂಡ್ಯ ಮೆಡಿಕಲ್ ಕಾಲೇಜ್ ಕೊವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
P179 ಅವರು ಪಾಸಿಟಿವ್ ಬಂದ ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,ಇವರ ತಾಯಿ, ಹೆಣ್ಣು ಮಗು ಮತ್ತು ಅಕ್ಕನ ಮಗನಿಗೆ ಇದೀಗ ಕೊರೋನಾ ಪಾಸಿಟಿವ್ ಬಂದಿದೆ. ಇವರೆಲ್ಲರು ಮಳವಳ್ಳಿಯ ಕೋಟೆ ಬೀದಿಯ 2ನೇ ವಾರ್ಡ್ ನ ನಿವಾಸಿಗಳು” ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.