ಕೋವಿಡ್-19: ಸರ್ಕಾರಕ್ಕೆ ನಮ್ಮ ಬೆಂಬಲ ಇದೆ; ವಿಪಕ್ಷವಾಗಿ ಎಚ್ಚರಿಕೆ ಗಂಟೆಯನ್ನೂ ಭಾರಿಸ್ತೇವೆ: ಡಿಕೆ ಶಿವಕುಮಾರ್
ಬೆಂಗಳೂರು(ಏ. 10): ಕೊರೋನಾ ವೈರಸ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡುತ್ತಿದೆ. ಬಿಕ್ಕಟ್ಟು ಶಮನಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷವಾಗಿ ತಾವು ಸರ್ಕಾರದ ಲೋಪದೋಷಗಳನ್ನ ಎತ್ತಿತೋರಿಸುವ ಕೆಲಸವನ್ನೂ ಮಾಡುತ್ತೇವೆ ಎಂದರು.
ಲಾಕ್ ಡೌನ್ ತೆರವುಗೊಳಿಸುವ ವಿಚಾರದಲ್ಲಿ ಸರ್ಕಾರದ ನಿರ್ಧಾರವನ್ನು ಎದುರುನೋಡುತ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ಮಾಡಿ ಅಭಿಪ್ರಾಯ ತಿಳಿಸುತ್ತೇವೆ. ಸರ್ಕಾರಕ್ಕೆ ಸಲಹೆಯನ್ನೂ ಕೊಡುತ್ತೇವೆ ಪ್ರತಿಪಕ್ಷವಾಗಿ ಎಚ್ಚರಿಕೆಯ ಗಂಟೆಯನ್ನೂ ಭಾರಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ರಾಜ್ಯದಲ್ಲಿ ವೆಂಟಿಲೇಟರ್ ಮಾಸ್ಕ್, ಮೆಡಿಕಲ್ ಕಿಟ್ ಮತ್ತಿತರ ಅಗತ್ಯ ವೈದ್ಯಕೀಯ ಪರಿಕರಗಳ ಕೊರತೆ ಬಿದ್ದಿದ್ದು ಆದಷ್ಟೂ ಬೇಗ ಸರ್ಕಾರ ವ್ಯವಸ್ಥೆ ಮಾಡಬೇಕು. ಈಗ ಬರುತ್ತದೆ, ನಾಳೆ ಬರುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಪಾಪ ನರ್ಸ್ಗಳು, ಪೊಲೀಸರು ಮತ್ತಿತರರಿಗೆ ಹೇಗೆ ರಕ್ಷಣೆ ಮಾಡುತ್ತಾರೋ ಗೊತ್ತಿಲ್ಲ ಎಂದು ವಿಷಾದಿಸಿದರು.
ಅಂಬೇಡ್ಕರ್ ಜಯಂತಿ ಆಡಂಬರ ಆಚರಣೆ ಬೇಡ:
ಏಪ್ರಿಲ್ 14ರಂದು ಅಂಬೇಡ್ಕರ್ ಅವರ 134ನೇ ಜಯಂತಿ ಇದೆ. ಅವರು ಕೊಟ್ಟ ಸಂವಿಧಾನದಿಂದಲೇ ನಾವು ಬದುಕುತ್ತಿದ್ದೇವೆ. ಅವರ ಜಯಂತಿ ಕಾರ್ಯಕ್ರಮವನ್ನು ನಾವು ಮಾಡಬೇಕು. ಆದರೆ, ಯಾರೂ ಕೂಡ ಅದ್ಧೂರಿಯಾಗಿ ಆಚರಣೆ ಮಾಡಬೇಡಿ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸೋಣ. ಕೆಪಿಸಿಸಿ ಕಚೇರಿಯಲ್ಲಿ ಏಳೆಂಟು ಜನರು ಮಾತ್ರ ಜಯಂತಿ ಕಾರ್ಯಕ್ರಮ ಆಚರಿಸುತ್ತೇವೆ. ಉಳಿದವರು ತಾವಿರುವಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಆಚರಿಸಿ ಎಂದು ಡಿಕೆಶಿ ಕರೆ ನೀಡಿದರು.
ರಕ್ತದಾನಕ್ಕೆ ಕರೆ:
ರಾಜ್ಯದಲ್ಲಿ ರಕ್ತದ ಕೊರತೆ ಇದೆ. ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಹಾಗೆಯೇ, ಕೆಪಿಸಿಸಿ ವತಿಯಿಂದ ವಿವಿಧ ಕಡೆ ರಕ್ತದಾನ ಶಿಬಿರ ಮಾಡಲಾಗುವುದು. ರಾಜ್ಯದ ಜನರು ಸಹಕಾರ ನೀಡಬೇಕು. ಆರೋಗ್ಯವಂತರೆಲ್ಲರೂ ರಕ್ತ ನೀಡಬೇಕು. ಎಲ್ಲೆಲ್ಲಿ ರಕ್ತ ಕೊಡಬೇಕು ಎಂದು ಪಕ್ಷದ ವತಿಯಿಂದ ಇನ್ನೆರಡು ದಿನದಲ್ಲಿ ತಿಳಿಸುತ್ತೇವೆ ಎಂದರು.