ದೇಶದಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ನೀಡಿ; ಕೇಂದ್ರಕ್ಕೆ ಮನವಿ ಸಲ್ಲಿಸಿದ ಮದ್ಯ ಮಾರಾಟಗಾರರ ಒಕ್ಕೂಟ
ನವ ದೆಹಲಿ (ಏಪ್ರಿಲ್ 09); ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ವಾರಗಳಿಂದ ಮದ್ಯ ಮಾರಾಟವನ್ನು ದೇಶದಾದ್ಯಂತ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ಮದ್ಯ ಅಗತ್ಯ ವಸ್ತು ಹಾಗೂ ಮದ್ಯಪಾನ ವ್ಯಸನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಲಾಕ್‌ಡೌನ್ ನಡುವೆಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆ ದೇಶದಾದ್ಯಂತ ಮದ್ಯ ಮಾರಾಟ ಮಾಡಲು ಅವಕಾಶ ನೀಡುವಂತೆ ಐಎಸ್ ಡಬ್ಲ್ಯೂ ಎಐ (ಮದ್ಯ ಮಾರಾಟಗಾರರ ಒಕ್ಕೂಟ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಕುರಿತು ಕೇಂದ್ರ ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಗೆ ಪತ್ರ ಬರೆದಿರುವ ಐಎಸ್ ಡಬ್ಲ್ಯೂ ಎಐ- ಆಫ್ ಇಂಡಿಯಾ, “2006ರ ಫುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಕಾಯ್ದೆಯ ಅಡಿ ಮದ್ಯ ಅಗತ್ಯ ವಸ್ತು. ಅಧಿಕೃತ ಮಾರಾಟ ಇಲ್ಲದಿದ್ದರೆ ಬ್ಲಾಕ್ ಮಾರ್ಕೆಟ್ ದಂಧೆ ನಡೆಯುತ್ತೆ. ಇದರಿಂದ ಪೊಲೀಸರಿಗೆ ಹೆಚ್ಚುವರಿ ಕೆಲಸ ಆಗುತ್ತದೆ. ಹೀಗಾಗಿ, ದಿನದ ಕೆಲವು ಗಂಟೆ ಮಾತ್ರ, ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾರಾಟ ಮಾಡಲು ಅವಕಾಶ ಕೊಡಿ” ಎಂದು ಮನವಿ ಮಾಡಿದೆ.
ಮಾರಣಾಂತಿಕ ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಏಪ್ರಿಲ್.14ರ ವರೆಗೆ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಅಲ್ಲದೆ, ಈ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಸಂಪೂರ್ಣ ತಡೆ ಘೋಷಿಸಲಾಗಿದೆ.
ಈ ನಡುವೆ ಏಪ್ರಿಲ್.14ರ ನಂತರವೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ. ಅಲ್ಲದೆ, ಪಶ್ಚಿಮ ಬಂಗಾಳ ಸರ್ಕಾರ ತನ್ನ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಕಾರಣ ದಿ ಇಂಡಿಯನ್ ಸ್ಪಿರಿಟ್ಸ್ ಅಂಡ್ ವೈನ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆ ತಮಗೂ ಮದ್ಯ ಮಾರಾಟ ಮಾಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದೆ.