ದೇಶದಲ್ಲಿ 149ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ, 5000 ಸೋಂಕು ಪೀಡಿತರು; ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ
ನವ ದೆಹಲಿ (ಏಪ್ರಿಲ್ 08); ಮಾರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರದ ಅಂತ್ಯಕ್ಕೆ ದೇಶದಲ್ಲಿ 149 ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ 4,789 ಜನರಿಗೆ ಈ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 508 ಹೊಸ ಪ್ರಕರಣಗಳು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಏಪ್ರಿಲ್ 14ರ ವರೆಗೆ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮತ್ತು ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವುದು ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ. ಅಲ್ಲದೆ, ಲಾಕ್‌ಡೌನ್ ಅವಧಿ ಮುಂದುವರೆಯುವ ಸೂಚನೆಯನ್ನೂ ನೀಡಿದೆ.
ಬಹುತೇಕ ಎಲ್ಲಾ ರಾಜ್ಯಗಳು ಈಗಾಗಲೇ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿವೆ. ಕೊರೋನಾ ಹಾಟ್‌ಸ್ಪಾಟ್‌ಗಳು ಎಂದು ಗುರಿತಿಸಲಾದ ಪ್ರದೇಶದ ಬಗ್ಗೆ ಹೆಚ್ಚಿನ ನಿಗಾ ವಹಿಸಿವೆ.
ದೇಶದಲ್ಲಿ ಸುಮಾರು 1.1 ಲಕ್ಷ ಜನರಿಗೆ COVID-19 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 66 ವಿದೇಶಿ ಪ್ರಜೆಗಳು ಸೇರಿದಂತೆ 4,312 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಸತತ ಚಿಕಿತ್ಸೆ ಮೂಲಕ ಈಗಾಗಲೇ 352 ಜನರನ್ನು ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೆಹಲಿ, ಪಂಜಾಬ್, ಮಧ್ಯಪ್ರದೇಶ, ತೆಲಂಗಾಣ, ಹರಿಯಾಣ, ಕೇರಳ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸೋಂಕು ತೀವ್ರವಾಗಿ ಹರಡುತ್ತಿದ್ದು ದಿನೇ ದಿನೇ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮಹರಾಷ್ಟ್ರದಲ್ಲಿ ಮಾತ್ರ ಸುಮಾರು 1,000 ಸೋಂಕಿತರಿದ್ದಾರೆ. ಮುಂಬೈನಲ್ಲಿ ಈವರೆಗೆ 40 ಜನ ಮೃತಪಟ್ಟಿದ್ದು ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವುದರಿಂದಲೇ ಪರಿಸ್ಥಿತಿ ಹತೋಟಿಯಲ್ಲಿದೆ. ಇಲ್ಲದಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಮತ್ತು ಈ ಸೋಂಕು ಸಾಮೂದಾಯಿಕವಾಗಿ ಹರಡುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಲಾಕ್‌ಡೌನ್ ಅವಧಿ ಏಪ್ರಿಲ್.14ರ ನಂತರವೂ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.