EBM News Kannada
Leading News Portal in Kannada

ಕೊರೋನಾದಿಂದ ತೀವ್ರ ಹೊಡೆತಕ್ಕೊಳಗಾದ ದೇಶಗಳಿಗೆ ಮಾತ್ರ ಹೈಡ್ರಾಕ್ಸಿಕ್ಲೋರಿಕ್ವಿನ್ ಪೂರೈಕೆ; ಮೋದಿ ಸ್ಪಷ್ಟನೆ

0

ನವದೆಹಲಿ (ಏ. 7): ಮಲೇರಿಯಾ ರೋಗಿಗಳಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನೇ ಕೊರೋನಾ ಸೋಂಕಿತರ ಚಿಕಿತ್ಸೆಗೂ ಬಳಸಬಹುದು ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. ಈ ಔಷಧವನ್ನು ಅತಿಹೆಚ್ಚು ಉತ್ಪಾದಿಸುವ ದೇಶವಾಗಿರುವ ಭಾರತದಿಂದ ತಮ್ಮ ದೇಶಕ್ಕೆ ಔಷಧವನ್ನು ರಫ್ತು ಮಾಡಬೇಕೆಂದು ಅಮೆರಿಕ ಸೇರಿದಂತೆ 30 ದೇಶಗಳು ಒತ್ತಡ ಹೇರಿದ್ದರು. ಆ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕೊರೋನಾ ದಾಳಿಗೆ ಅತಿಹೆಚ್ಚು ನಲುಗಿರುವ ದೇಶಗಳಿಗೆ ಮಾತ್ರ ಹೈಡ್ರಾಕ್ಸಿಕ್ಲೋರೋಕ್ವಿನ್ ಸರಬರಾಜು ಮಾಡುವುದಾಗಿ ತಿಳಿಸಿದೆ.

ಕೊರೋನಾ ನಿಯಂತ್ರಣಕ್ಕೆ ಸಂಶೋಧಕರು ಶಿಫಾರಸು ಮಾಡಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ಬೇರೆ ದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಸ್ವತಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರೇ ತಮ್ಮ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ರಫ್ತು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದರು. ಒಂದುವೇಳೆ ಈ ಔಷಧಿಯ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸದಿದ್ದರೆ ಅದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ, ಇದಕ್ಕೆ ಪ್ರತಿದಾಳಿಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಯಾವುದೇ ಒಂದು ಜವಾಬ್ದಾರಿಯುತ ಸರ್ಕಾರದಂತೆ ಭಾರತ ಕೂಡ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಿರುವ ದೇಶಗಳಿಗೆ ಈ ಔಷಧವನ್ನು ರಫ್ತು ಮಾಡಲು ನಿರ್ಧರಿಸಿದೆ. ಕೆಲವು ದೇಶಗಳಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಿತಿಮೀರುತ್ತಿದೆ. ಅಂತಹ ದೇಶಗಳಿಗೆ ಭಾರತ ಸಹಾಯಹಸ್ತ ಚಾಚಲಿದೆ ಎಂದು ಪ್ರಧಾನಿ ಮೋದಿ ಇಂದು ಸ್ಪಷ್ಟಪಡಿಸಿದ್ದಾರೆ.

ಇಡೀ ವಿಶ್ವವನ್ನೇ ಕಂಗಾಲಾಗಿಸಿರುವ ಕೊರೋನಾಗೆ ಇನ್ನೂ ಯಾವುದೇ ಔಷಧ ಪತ್ತೆಯಾಗಿಲ್ಲ. ವಿಶ್ವಾದ್ಯಂತ ಸುಮಾರು 74 ಸಾವಿರ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೂ ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಮಲೇರಿಯಾಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನೇ ಕೊರೋನಾ ವೈರಸ್​ ತಡೆಗಟ್ಟಲು ಬಳಸಬಹುದು ಎಂದು ಸಂಶೋಧಕರು ಹೇಳಿದ್ದರು. ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾಗೆ ರಾಮಬಾಣವಾಗಬಲ್ಲದು ಎಂದು ತಿಳಿದಿದ್ದೇ ತಡ ಈ ಔಷಧಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಮಾ. 25ರಂದು ನಿಷೇಧ ಹೇರಿತ್ತು.

Leave A Reply

Your email address will not be published.