EBM News Kannada
Leading News Portal in Kannada

ಮಂಡ್ಯದತ್ತ ತಿರುಗಿ ನೋಡದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್

0

ಮಂಡ್ಯ, ಏಪ್ರಿಲ್ 02: ಕೊರೊನಾ ವೈರಸ್‌ನಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಹೀಗಿರುವಾಗ ಆಯಾಯ ಜಿಲ್ಲೆಯ ಉಸ್ತುವಾರಿ ಸಚಿವರ ಪಾತ್ರಗಳು ಹೆಚ್ಚಾಗಿರುತ್ತವೆ. ಜತೆಗೆ ಜನರ ಜತೆಯಲ್ಲಿದ್ದು, ಸಚಿವರು ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಆದರೆ ಮಂಡ್ಯದಲ್ಲಿ ಈ ಕೆಲಸವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಆರ್.ಅಶೋಕ್ ಇದುವರೆಗೂ ಜಿಲ್ಲೆಗೆ ಆಗಮಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಗೆ ಆಗಮಿಸಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾಹಿತಿ ಕಲೆ ಹಾಕಿ ಆಗಬೇಕಾಗಿರುವ ಅಗತ್ಯ ಕೆಲಸಗಳತ್ತ ಗಮನಹರಿಸಬೇಕಾಗಿತ್ತು. ಆದರೆ ಅದ್ಯಾವುದೂ ಆಗುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿ ವರ್ಗಗಳು ಮಾಡಬೇಕಾದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದರಿಂದ ಉಸ್ತುವಾರಿ ಸಚಿವರು ಹಗುರವಾಗಿದ್ದಾರೆ ಎಂದರೂ ತಪ್ಪಾಗಲ್ಲ.

ಮೂರು ತಿಂಗಳ ಹಿಂದೆ ಗಗನಚುಕ್ಕಿ ಜಲಪಾತೋತ್ಸವಕ್ಕೆ ಬಂದು ಹೋದವರು ಮತ್ತೆ ಇದುವರೆಗೂ ಜಿಲ್ಲೆಯತ್ತ ಮುಖ ಮಾಡಿಲ್ಲ. ಬಹುಶಃ ಇದಕ್ಕೆ ಕಾರಣವೂ ಇದೆ. ವಿಧಾನಸಭಾ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಶಾಸಕ ಕೆ.ಸಿ.ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಚಿವರಾಗಿದ್ದು, ಸದ್ಯ ಅಶೋಕ್ ಅವರು ತಮ್ಮ ಜವಾಬ್ದಾರಿಯನ್ನು ನಾರಾಯಣಗೌಡರಿಗೆ ನೀಡಿದ್ದಾರಾ ಎಂಬ ಅನುಮಾನವೂ ಜನವಲಯದಲ್ಲಿ ವ್ಯಕ್ತವಾಗುತ್ತಿದೆ. ಜನರು ಎಲ್ಲವನ್ನು ಅವಲೋಕಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ತಮ್ಮೊಂದಿಗೆ ಯಾರು ಇರುತ್ತಾರೋ ಅವರನ್ನು ಬಹುಬೇಗ ತಮ್ಮ ನಾಯಕರನ್ನಾಗಿ ಒಪ್ಪಿಕೊಳ್ಳುತ್ತಾರೆ. ಇದರ ಅರಿವು ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರಿಗೆ ಇಲ್ಲವಾಗಿದೆ.

ಮಂಡ್ಯದಲ್ಲಿ ಕೊರೊನಾ ವೈರಸ್ ಕುರಿತಂತೆ ಹಲವು ಸಮಸ್ಯೆ ಎದುರಾಗಿವೆ. ಆದರೆ ಈ ವೇಳೆ ಜಿಲ್ಲೆಯಲ್ಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಉಸ್ತುವಾರಿ ಸಚಿವ ಆರ್.ಅಶೋಕ್ ಬೆಂಗಳೂರಿನಲ್ಲಿದ್ದು, ತಮಗೆ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಕೆಲವರ ಆರೋಪವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಸಕ್ಕರೆ ಕಾರ್ಖಾನೆಗಳ ಖಾಸಗೀಕರಣ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಯಾವುದೇ ರೀತಿಯ ಗಮನ ಹರಿಸದೆ ಇರುವುದರಿಂದ ಇವತ್ತು ಜಿಲ್ಲೆಯೊಳಗೆ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಪರಿತಪಿಸುತ್ತಿದ್ದಾರೆ. ಬೆಳೆಗಳನ್ನೆಲ್ಲಾ ತಿಪ್ಪೆ, ಕೆರೆಗೆ ಸುರಿದು ಹಾಳು ಮಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಮಾರುಕಟ್ಟೆ ಸೃಷ್ಟಿಗೆ ಪೂರಕವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ರೈತರಿಗೆ ಅನುಕೂಲ ಕಲ್ಪಿಸುವ, ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಪ್ರಯತ್ನವನ್ನು ಜಿಲ್ಲಾ ಸಚಿವರಾಗಿ ಮಾಡಬಹುದಿತ್ತು. ಆದರೆ ಏಕೆ ಮಾಡುತ್ತಿಲ್ಲ ಎಂಬುದೇ ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Leave A Reply

Your email address will not be published.