ಕೊರೊನಾ ಸಂಕಷ್ಟ: ಬಡವರ ಹೊಟ್ಟೆ ತುಂಬಿಸಲಿದೆ HDK ಜನತಾ ದಾಸೋಹ
ಬೆಂಗಳೂರು, ಏಪ್ರಿಲ್ 2: ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ರಾಷ್ಟ್ರವನ್ನು ಲಾಕ್ ಡೌನ್ ಮಾಡಲಾಗಿದ್ದು, ಬಡವರು, ದಿನಗೂಲಿ ಕಾರ್ಮಿಕರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್ ನಿಂದ ತುತ್ತು ಅನ್ನಕ್ಕೂ ಒದ್ದಾಡುತ್ತಿರುವವರಿಗೆ ಇಂದಿರಾ ಕ್ಯಾಂಟೀನ್ ನಿಂದ ಉಚಿತ ಆಹಾರ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಹಸಿದವರ ಹೊಟ್ಟೆ ತುಂಬಿಸಲು ‘ಎಚ್.ಡಿ.ಕೆ ಜನತಾ ದಾಸೋಹ’ ಆರಂಭವಾಗಿದೆ. ಇದೇ ‘ಎಚ್.ಡಿ.ಕೆ ಜನತಾ ದಾಸೋಹ’ವನ್ನು ಮಂಡ್ಯ, ಮೇಲುಕೋಟೆ, ತುಮಕೂರು ಮತ್ತು ನಾಗಮಂಗಲದಲ್ಲೂ ಆರಂಭಿಸುವಂತೆ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಇಂದು ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮಾಜಿ ಸಿ.ಎಂ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಗಳಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಂಡ್ಯ ಶಾಸಕ ಶ್ರೀನಿವಾಸ್, ಮೇಲುಕೋಟೆ ಶಾಸಕ ಪುಟ್ಟರಾಜು, ನಾಗಮಂಗಲ ಶಾಸಕ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ, ಶಿರಾ ಶಾಸಕ ಸತ್ಯನಾರಾಯಣ ಪಾಲ್ಗೊಂಡಿದ್ದರು. ಕೊರೊನಾ ವೈರಸ್ ತಡೆಗೆ ಎರಡೂ ಜಿಲ್ಲೆಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಎಚ್.ಡಿ.ಕುಮಾರಸ್ವಾಮಿ ಚರ್ಚಿಸಿದರು. ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿರುವವರಿಗೆ, ಪ್ರಮುಖವಾಗಿ ರೈತರಿಗೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಕ್ಷೇತ್ರದ ಮಟ್ಟದಲ್ಲಿ ನೀಡುವಂತೆ ಸೂಚಿಸಿದರು. ರಾಮನಗರ, ಚನ್ನಪಟ್ಟಣದಲ್ಲಿ ತಾವು ಆರಂಭಿಸಿರುವ ‘ಎಚ್ಡಿಕೆ ಜನತಾ ದಾಸೋಹ’ವನ್ನು ಎಲ್ಲರೂ ಆರಂಭಿಸಿ ಹಸಿದವರಿಗೆ ಆಹಾರ ಪೂರೈಸುವಂತೆ ತಿಳಿಸಿದರು. ಇದಕ್ಕೆ ಶಾಸಕರೂ ಒಪ್ಪಿಗೆ ಸೂಚಿಸಿದ್ದಾರೆ.