ಕೃಷಿಯಲ್ಲಿ ನೀರಿನ ಬಳಕೆ ಶೇ. 50ರಷ್ಟು ತಗ್ಗಿಸದಿದ್ದರೆ ಮುಂದಿದೆ ಅಪಾಯ: ಕಸ್ತೂರಿ ರಂಗನ್
ಹೈದರಾಬಾದ್: ಕೃಷಿಯಲ್ಲಿ ನೀರಿನ ಬಳಕೆಯನ್ನು 50 ಶೇಕಡಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿಸದಿದ್ದರೆ ಅಪಾಯ ಕಾದಿದೆ, ಒಂದೊಂದು ಬಿಂದು ನೀರನ್ನೂ ಕಾಪಿಡುವ ಅವಶ್ಯಕತೆ ಇದೆ ಎಂದು ಖ್ಯಾತ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್ ಹೇಳಿದ್ದಾರೆ.
ಪ್ರಸಕ್ತ ದೇಶದಲ್ಲಿ ಒಟ್ಟಾರೆ ನೀರಿನಲ್ಲಿ 80-85 ಶೇಕಡಾದಷ್ಟು ಕೃಷಿಗೆ ಬಳಕೆಯಾಗುತ್ತಿದೆ. ಅದನ್ನು 50 ಶೇಕಡಾಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿಸಬೇಕಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರೂ ಆಗಿರುವ ಕಸ್ತೂರಿರಂಗನ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ಕೃಷಿ ನೀರಾವರಿಗೆ ಸಂಬಂಧಿಸಿ ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಜಲ ನಿಯಂತ್ರಣ ನೀತಿ ರೂಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಜಲತಜ್ಞ ಮಿಹಿರ್ ಶಾ ಅವರು ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಕಸ್ತೂರಿರಂಗನ್ ಹೇಳಿದರು.
ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು, ”ದೇಶವು ಇತಿಹಾಸದಲ್ಲೇ ಅತ್ಯಂತ ಭಯಾನಕ ಜಲ ಸಂಕಟವನ್ನು ಎದುರಿಸುತ್ತಿದೆ. 60 ಕೋಟಿ ಜನ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಸ್ವಚ್ಛ ನೀರು ಸಿಗದೆ ಪ್ರತಿ ವರ್ಷ 2 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ತಿಳಿಸಿದೆ. 2030ರ ವೇಳೆಗೆ ದೇಶದ ನೀರಿನ ಬೇಡಿಕೆ ಲಭ್ಯ ಇರುವ ನೀರಿನ ಪ್ರಮಾಣಕ್ಕಿಂತ ದುಪ್ಪಟ್ಟಾಗಲಿದೆ. ಹಾಗಾಗಿ ಕೋಟಿಗಟ್ಟಲೆ ಜನರು ನೀರಿನ ಹಾಹಾಕಾರಕ್ಕೆ ಒಳಗಾಗಲಿದ್ದಾರೆ. ಇದೆಲ್ಲದರ ಪರಿಣಾಮವಾಗಿ ದೇಶದ ಜಿಡಿಪಿ 6 ಶೇಕಡಾದಷ್ಟು ಕಡಿಮೆಯಾಗಲಿದೆ,” ಎಂದು ಎಚ್ಚರಿಸಿತ್ತು.
ಕಸ್ತೂರಿರಂಗನ್ ಸಲಹೆಗಳು
ಜಲ ಮೂಲಗಳಿಗೆ ಪುನಶ್ಚೇತನ ನೀಡಬೇಕು.
ಅಂತರ್ಜಲದ ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕು.
ಜಲ ಪರಿಸ್ಥಿತಿ ಭಯಾನಕವಾಗಿದೆ ಎಂಬರ್ಥದಲ್ಲೇ ನಾವು ಕ್ರಮ ಕೈಗೊಳ್ಳಬೇಕು.
ಪ್ರತಿಯೊಂದು ಬಿಂದು ನೀರನ್ನೂ ಸೂಕ್ತವಾಗಿ ನಿರ್ವಹಿಸಬೇಕು, ಕಾಪಿಡಬೇಕು.