ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಉಗ್ರ ಚಟುವಟಿಕೆಗಳು; ಅಮರನಾಥ ಯಾತ್ರೆ ಹಿನ್ನಲೆ ಭದ್ರತೆ ಹೆಚ್ಚಿಸಿದ ಅಧಿಕಾರಿಗಳು
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಶಂಕೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸಕ್ತ ವರ್ಷದ ಅಮರನಾಥ ಯಾತ್ರೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಿಆರ್’ಪಿಎಫ್ ಹೆಚ್ಚುವರಿ ಡಿಜಿ ಗುರುವಾರ ಹೇಳಿದ್ದಾರೆ.
ಭದ್ರತೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಡಿಜಿ ವಿಎಸ್’ಕೆ ಕೌಮುಡಿಯವರು, ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಅಮರನಾಥ ಯಾತ್ರೆ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳುತ್ತಿದ್ದು, ಎಲ್ಲಾ ಗಡಿ ಪೊಲೀಸ್ ಠಾಣೆಗಳಲ್ಲಿ, ಪೋಸ್ಟ್ ಗಳಲ್ಲಿ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಗಡಿ ನುಸುಳುವಿಕೆ ಹಾಗೂ ಉಗ್ರರ ದಾಳಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 28 ರಿಂದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ದೇಗುಲಕ್ಕೆ ಯಾತ್ರೆ ಆರಂಭಗೊಳ್ಳಲಿದೆ. ಎರಡು ತಿಂಗಳುಗಳ ಕಾಲ ಯಾತ್ರೆ ನಡೆಯಲಿದ್ದು, ಆಗಸ್ಟ್ ಅಂತ್ಯದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.
ಕಳೆದ ಬಾರಿ ಕೂಡ ಅಮರನಾಥ ಯಾತ್ರೆ ವೇಳೆ ಉಗ್ರರು ದಾಳಿ ನಡೆಸಿದ್ದು. ಈ ರೀತಿಯ ದಾಳಿಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದೆ.