ಭದ್ರತೆ ಕುರಿತು ಕೇಜ್ರಿವಾಲ್ ಭರವಸೆ, ಔಪಚಾರಿಕ ಚರ್ಚೆಗೆ ಸಿದ್ದ ಎಂದ ದೆಹಲಿ ಐಎಎಸ್ ಅಧಿಕಾರಿಗಳು
ನವದೆಹಲಿ: ನವದೆಹಲಿಯ ಐಎಎಸ್ ಅಧಿಕಾರಿಗಳು ತಮ್ಮ ಸುರಕ್ಷತೆ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿದ್ದ ಭರವಸೆಯಿಂದ ಸಂತುಷ್ಟರಾಗಿದ್ದು ಮುಖ್ಯಮಂತ್ರಿಗಳೊಡನೆ ಔಪಚಾರಿಕ ಮಾತುಕತೆಗೆ ಸಿದ್ದವಿರುವುದಾಗಿ ಹೇಳಿದ್ದಾರೆ.
ಅಧಿಕಾರಿಗಳು ತಮ್ಮ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿ “ಗಟ್ಟಿಯಾದ ಮಧ್ಯಸ್ಥಿಕೆ” ಗೆ ಎದುರು ನೋಡುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಅಧಿಕಾರಿಗಳ ಜತೆಗಿನ ಸಭೆಯ ವೇಳೆ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಆಡಳಿತ ಪಕ್ಷದ ಶಾಸಕರು ಹಲ್ಲೆ ನಡೆಸಿದ್ದು ಇದನ್ನು ಖಂಡಿಸಿ ನಾಲ್ಕು ತಿಂಗಳಿನಿಂದ ಅಧಿಕಾರಿ ವರ್ಗ ಭಾಗಶಃ ಮುಷ್ಕರ ನಡೆಸಿತ್ತು.
ಎಜಿಎಂಯುಟ (ಅರುಣಾಚಲ ಪ್ರದೇಶ, ಗೋವಾ, ಮಿಜೋರಾಮ್ ಮತ್ತು ಕೇಂದ್ರಾಡಳಿತ ಪ್ರದೇಶಗಳು) ಅಧಿಕಾರಿಗಳ ಒಕ್ಕೂಟವು ಹೇಳುವಂತೆ ಅವರು “ಸಮರ್ಪಣಾ ಮನೋಭಾವ”ದೊಂದಿಗೆ ಸಂಪೂರ್ಣವಾಗಿ ಕಾರ್ಯಚಟುವಟಿಕೆಯಲ್ಲಿ ಭಾಗಿಗಳಾಗುತ್ತಾರೆ.
ಜಿಎನ್ಸಿಟಿಡಿ ಅಧಿಕಾರಿಗಳು ಮುಖ್ಯಮಂತ್ರಿಗಳ ಮನವಿಯನ್ನು ಸ್ವಾಗತಿಸಿದ್ದಾರೆ. ನಾವು ಸಂಪೂರ್ಣ ಸಮರ್ಪಣೆ ಮತ್ತು ಚಟುವಟಿಕೆಯಿಂದ ಕೆಲಸದಲ್ಲಿ ಭಾಗವಹಿಸುತ್ತೇವೆ ಎಂದು ಅಸೋಸಿಯೇಷನ್ ಟ್ವೀಟ್ ನಲ್ಲಿ ಹೇಳಿದೆ.
“ನಾವು ನಮ್ಮ ಭದ್ರತೆ ಮತ್ತು ಘನತೆಯನ್ನು ಕಾಪಾಡಿಕೊಳ್ಳುವ ಸಂಬಂಧ “ಗಟ್ಟಿಯಾದ ಮಧ್ಯಸ್ಥಿಕೆ” ಎದುರು ನೋಡುತ್ತೇವೆ, ಅದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿಯೊಂದಿಗೆ ಔಪಚಾರಿಕ ಚರ್ಚೆಗಳಿಗೆ ನಾವು ಮುಕ್ತರಾಗಿದ್ದೇವೆ”
ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲು ತನ್ನ ಎಲ್ಲಾ ಅಧಿಕಾರಗಳನ್ನು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಅಧಿಕಾರಿಗಳಿಗೆ ಭಾನುವಾರ ಭರವಸೆ ನಿಡಿದ್ದರು.
“ಐಎಎಸ್ ಅಧಿಕಾರಿಗಳು ತಮ್ಮ ಸುರಕ್ಷತೆಯ ಬಗ್ಗೆ ಇಂದಿನ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆಂದು ನಾನು ಕೇಳಿದ್ದೇನೆ. ನನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಕಾರ ಹಾಗೂ ಸಂಪನ್ಮೂಲಗಳೊಂದಿಗೆ ಅವರ ಸುರಕ್ಷತೆ ಖಾತ್ರಿ ಮಾಡುವುದಾಗಿ ನಾನು ಅವರಿಗೆ ಭರವಸೆ ನೀಡುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.