ಉಗ್ರರ ನುಸುಳಿವಿಕೆ ಕುರಿತು ಗುಪ್ತಚರ ಮಾಹಿತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆ: ಸೇನಾ ಮೂಲಗಳು
ನವದೆಹಲಿ; ಉಗ್ರರ ನುಸುಳುವಿಕೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಿದ್ದಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ರಂಜಾನ್ ಹಿನ್ನಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಘೋಷಣೆ ಮಾಡಲಾಗಿದ್ದ ಒಂದು ತಿಂಗಳ ಕದನ ವಿರಾಮವನ್ನು ನಿನ್ನೆಯಷ್ಟೇ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡಿತ್ತು.
ಭಾರತದೊಳಗೆ ಉಗ್ರರು ನುಸುಳಿರುವ ಕುರಿತಂತೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆಯೇ ಉಗ್ರರ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಪದೇ ಪದೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಲೇ ಇದೆ. ಪಾಕಿಸ್ತಾನದ ದುರ್ವರ್ತನೆಗೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡುತ್ತಿದೆ.
ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಸೇನಾಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.
ಶನಿವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದರು.