‘ರೈಸಿಂಗ್ ಕಾಶ್ಮೀರ್’ ಸಂಪಾದಕ ಬುಖಾರಿ ಹತ್ಯೆ ಖಂಡಿಸಿದ ಸಚಿವರು, ಪ್ರತಿಪಕ್ಷ ನಾಯಕರು, ಮಾಧ್ಯಮ ಸಂಸ್ಥೆಗಳು
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ‘ರೈಸಿಂಗ್ ಕಾಶ್ಮೀರ್’ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆಯನ್ನು ಕೇಂದ್ರ ಸಚಿವರು, ಪ್ರತಿಪಕ್ಷ ನಾಯಕರು ಹಾಗೂ ಮಾಧ್ಯಮ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ.
ರಾಜಕಾರಣಿಗಳು ಪಕ್ಷಬೇಧ ಮರೆತು ಹಿರಿಯ ಪತ್ರಕರ್ತನ ಹತ್ಯೆಯನ್ನು ಖಂಡಿಸಿದ್ದು, ಇದೊಂದು ಹೇಡಿಗಳ ಕೃತ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಉಗ್ರರಿಂದ ಪತ್ರಕರ್ತನ ಹತ್ಯೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ಇದೊಂದು ಹೇಡಿಗಳ ಕೃತ್ಯ ಮತ್ತು ಕಾಶ್ಮೀರದ ಪ್ರಬಲ ಧನಿಯನ್ನು ಅಡಗಿಸುವ ಯತ್ನ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಬುಕಾರಿ ಹತ್ಯೆಯನ್ನು ಖಂಡಿಸಿದ್ದು, ಬುಕಾರಿ ಕಾಶ್ಮೀರದಲ್ಲಿ ಶಾಂತಿಗಾಗಿ ನಿರ್ಭೀತಿಯ ಹೋರಾಟ ನಡೆಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಹಿರಿಯ ಪತ್ರಕರ್ತನ ಹತ್ಯೆಯನ್ನು ಖಂಡಿಸಿದ್ದು, ಇದೊಂದು ಹೇಡಿಗಳ ಕೃತ್ಯ ಎಂದಿದ್ದಾರೆ.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಭಾರತೀಯ ಸಂಪಾದಕರ ಕೂಟ ಸಹ ಬುಕಾರಿ ಹತ್ಯೆಯನ್ನು ಖಂಡಿಸಿದೆ.
ಶ್ರೀನಗರದ ಲಾಲ್ ಚೌಕ್ ಬಳಿ ಇರುವ ದಿನ ಪತ್ರಿಕೆ ಕಚೇರಿಯ ಹೊರಗಡೆ ಶುಜಾತ್ ಬುಖಾರಿ ಮತ್ತು ಅವರ ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದ ಬುಖಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಬುಖಾರಿ ಅವರಿಗೆ ರಕ್ಷಣೆ ನೀಡುತ್ತಿದ್ದ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.