ಇಸಿಸ್ ಗೆ ಬೆಂಬಲ: ಕೇರಳದ 8 ಮಂದಿ ವಿರುದ್ಧ ಎನ್ಐಎ ದೂರು ದಾಖಲು
ತಿರುವನಂತಪುರಂ: ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇರೆಗೆ ಕೇರಳ ಮೂಲದ 8 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ದೂರು ದಾಖಲಿಸಿಕೊಂಡಿದೆ.
ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಪರ ಕೇರಳದಲ್ಲಿ ಶಂಕಾಸ್ಪದ ಕಾರ್ಯಾಚರಣೆ ನಡೆಸಿದ್ದ ಆರೋಪದ ಮೇರೆಗೆ ಕೇರಳದ ಮಲಪ್ಪುರಂ ಪೊಲೀಸರು 8 ಮಂದಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಇದೀಗ ಇದೇ 8 ಮಂದಿ ವಿರುದ್ಧ ಎನ್ಐಎ ಕೂಡ ದೂರು ದಾಖಲಿಸಿಕೊಂಡಿದೆ. ಕೇರಳದ ಮಲ್ಲಪುರಂ ನಿವಾಸಿಗಳಾದ ಶೈಬು ನಿಹಾರ್, ಮಂಜೂರ್, ಮನ್ಸೂರ್, ಶಾನದ್, ಫಜಿದ್, ಅಶ್ರಫ್ ಮೌಲಾವಿ, ಸೇಫರ್ ಮತ್ತು ಮುಹದಿಸ್ ವಿರುದ್ಧ ಎನ್ಐಎ ದೂರು ದಾಖಲಿಸಿಕೊಂಡಿದೆ.
ಕೇರಳದಲ್ಲಿ ಉಗ್ರ ಸಂಘಟನೆ ಪರ ನೇರ ಮತ್ತು ಪರೋಕ್ಷವಾಗಿ ಕಾರ್ಯಾಚರಣೆ ನಡೆಸಿದ ಗಂಭೀರ ಆರೋಪವಿದ್ದು, ಉಗ್ರ ಸಂಘಟನೆಗಾಗಿ ಯುವಕರನ್ನು ನೇಮಕ ಮಾಡುವ ಕಾರ್ಯವನ್ನು ಮಾಡುತ್ತಿದ್ದರು. ಭಾರತದಿಂದ ಬಹ್ರೇನ್ ಮೂಲಕವಾಗಿ ಸಿರಿಯಾಗೆ ಯುವಕರನ್ನು ರವಾನಿಸಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸೇರಿಸಿ, ಯುದ್ಧ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.