ಕರ್ನಾಟಕ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಕೇಂದ್ರದಿಂದ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ!
ನವದೆಹಲಿ: ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರ ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿದೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ವಿವಾದ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಕೊನೆಗೂ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು ರಚನೆ ಮಾಡಿದೆ.
ಇಂದು ಗೆಜೆಟ್ ಮುದ್ರಣ ವಿಭಾಗದ ಹಿರಿಯ ಜಂಟಿ ಆಯುಕ್ತ ಆರ್ ಕೆ ಕನೋಡಿಯಾ ಭಾರತ ಸರ್ಕಾರಿ ಮುದ್ರಣದ ಮ್ಯಾನೇಜರ್ ಗೆ ಪ್ರಾಧಿಕಾರ ರಚನೆ ಕುರಿತಾಗಿ ಗ್ಯಾಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದರು. ಅದರಂತೆ ಗೆಜೆಟ್ ಮುದ್ರಣವಾಗಿದ್ದು ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ.
ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಕೇಂದ್ರ ಜಲಸಂಪನ್ಮೂಲ ಇಲಾಖೆ, ಅಧ್ಯಕ್ಷ ಮತ್ತು 8 ಮಂದಿ ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಈ 8 ಮಂದಿ ಸದಸ್ಯರ ಪೈಕಿ ನಾಲ್ಕು ಮಂದಿ ಖಾಯಂ ಸದಸ್ಯರಾಗಿದ್ದು, ಉಳಿದ ನಾಲ್ಕು ಮಂದಿ ತಾತ್ಕಾಲಿಕ ಸದಸ್ಯರಾಗಿರಲಿದ್ದಾರೆ. ಈ ಸದಸ್ಯರು ಜಲವಿವಾದ ಇರುವ ನಾಲ್ಕು ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಈ ಸಮಿತಿ ಕಾವೇರಿ ನದಿ ಪಾತ್ರದ ರಾಜ್ಯಗಳ ನೀರಿನ ಅಗತ್ಯತೆ, ಡ್ಯಾಂಗಳಲ್ಲಿರುವ ನೀರಿನ ಪ್ರಮಾಣ, ರಾಜ್ಯಗಳ ಅವಶ್ಯಕತೆಗೆ ಅನುಗುಣವಾಗಿ ಆಯಾ ರಾಜ್ಯಗಳಿಗೆ ನೀರು ಬಿಡುಗಡೆ ಮಾಡಲಿದೆ.
ಈ ಸಮಿತಿಯು ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಜಾರಿ ಮಾಡಲಿದ್ದು, ತನ್ನ ಈ ಪ್ರಕ್ರಿಯೆಗೆ ಯಾವುದೇ ಸದಸ್ಯ ರಾಜ್ಯ ಅಂದರೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಅಸಮ್ಮತಿ ಅಥವಾ ಸಹಕಾರ ನೀಡದಿದ್ದರೆ ಆಗ ಸಮಿತಿ ತನ್ನ ಕರ್ತವ್ಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಮೊರೆ ಹೋಗಬಹುದು. ಅಲ್ಲದೆ ತನ್ನ ನಿರ್ದೇಶನದಂತೆ ನೀರು ಬಿಡದೇ ಇದ್ದ ಪಕ್ಷದಲ್ಲಿ ಈ ಸಮಿತಿಯೇ ಆ ರಾಜ್ಯದ ವಿರುದ್ದ ಕ್ರಮ ಕೈಗೊಳ್ಳುವ ಅಧಿಕಾರ ಕೂಡ ಹೊಂದಿದೆ. ಇನ್ನು ಈ ಸಮಿತಿ ಕಾವೇರಿ ನದಿ ಪಾತ್ರದ ಡ್ಯಾಂಗಳ ಮೇಲ್ವಿಚಾರಣೆ ಕೂಡ ನಡೆಸುವ ಅಧಿಕಾರ ಹೊಂದಿದೆ. ಅಂತೆಯೇ ಬಿಡುಗಡೆಯಾದ ನೀರಿನ ಪ್ರಮಾಣ ಮತ್ತು ಬಿಡುಗಡೆಯಾದ ನೀರು ಶೇಖರಣೆಯಾದ ಪ್ರಮಾಣವನ್ನು ಇದೇ ಸಮಿತಿ ಸದಸ್ಯರು ಅಳತೆ ಮಾಡಲಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನೀರು ಹಂಚಿಕೆಗೆ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸುಪ್ರೀಂ ಸೂಚನೆ ಹಿನ್ನೆಲೆ ಅಂತರಾಜ್ಯ ನದಿ ನೀರು ವಿವಾದ 1956 ರ ಕಾಯ್ದೆ ಅನ್ವಯ ಕರಡು ತಯಾರಿಸಿದ್ದ ಕೇಂದ್ರ ಸರ್ಕಾರ ಮೇ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತ್ತು. ಈ ವೇಳೆ ಕೆಲ ಮಾರ್ಪಾಡುಗಳೊಂದಿಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಸಮಿತಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.