ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು: ಗಡಿ ನುಸುಳಿರುವ 12 ಉಗ್ರರು; ದೆಹಲಿ, ಕಾಶ್ಮೀರದಾದ್ಯಂತ ಹೈಅಲರ್ಟ್
ಶ್ರೀನಗರ: ದೇಶದಲ್ಲಿ ವಿಧ್ವಸಂಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಗಡಿಯೊಳಗೆ 12ಕ್ಕೂ ಹೆಚ್ಚು ಉಗ್ರರು ನುಗ್ಗಿದ್ದು ಈ ಹಿನ್ನಲೆಯಲ್ಲಿ ರಾಜಧಾನಿ ದೆಹಲಿ, ಶ್ರೀನಗರ ಸೇರಿದಂತೆ ಹಲವೆಡೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ 12 ಉಗ್ರರು ಜಮ್ಮು ಮತ್ತು ಕಾಶ್ಮೀರದ ಗಡಿ ಮೂಲಕ ಭಾರತದೊಳಗೆ ನುಸುಳಿದ್ದು, ಗುಂಪು ಗುಂಪುಗಳಾಗಿ ದೇಶದ ವಿವಿಧೆಡೆ ಜೂನ್.17ರ ರಂಜಾನ್ ಹಬ್ಬದ ದಿನದಂದು ಭಾರೀ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕಳೆದ ವರ್ಷ ಕೂಡ ಬದ್ರ್ ಯುದ್ಧದ ಆಚರಣೆ ಹಿನ್ನಲೆಯಲ್ಲಿ ಕಾಶ್ಮೀರದ ಹಲವೆಡೆ ಉಗ್ರರು ಸರಣಿ ದಾಳಿಗಳನ್ನು ನಡೆಸಿದ್ದರು. ಈ ಎಲ್ಲಾ ದಾಳಿಗಳ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.