ಖಾತೆ ಹಂಚಿಕೆಗೆ ದೋಸ್ತಿಗಳ ಒಮ್ಮತ: ಕಾಂಗ್ರೆಸ್ ಹಿರಿಯ ನಾಯಕರಿಗೆ ಕೊಕ್; ಯಾರಿಗೆ ಯಾವ ಖಾತೆ, ವಿವರ ಇಲ್ಲಿದೆ
ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಸಂಬಂಧವಾಗಿ ದೋಸ್ತಿ ಪಕ್ಷಗಳಲ್ಲಿ ಬಹುತೇಕ ಒಮ್ಮತ ಮೂಡಿದ್ದು ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ.
ಮೂಲಗಳ ಪ್ರಕಾರ ಹಣಕಾಸು, ಕಂದಾಯ ಮತ್ತು ಲೋಕೋಪಯೋಗಿ ಹಾಗೂ ಸಹಕಾರ ಖಾತೆಗಳು ಜೆಡಿಎಸ್ ಪಾಲಾಗಲಿವೆ, ಇನ್ನೂ ಕೈಗಾರಿಕೆ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಗೃಹ ಖಾತೆ ಬೆಂಗಳೂರು ನರಗಾಭಿವೃದ್ಧಿ ಹಾಗೂ ಇಂಧನ ಖಾತೆಗಳು ಕಾಂಗ್ರೆಸ್ ಗೆ ಸಿಗಲಿದ್ದು, ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವಲ್ಲಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ನಲ್ಲಿ ಸಚಿವ ಸಂಪುಟದ ಆಕಾಂಕ್ಷಿಗಳ ಪಟ್ಟಿ ಬಹು ದೊಡ್ಡದಿದ್ದು, 17 ರಿಂದ 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿಲಿಗದ್ದು ಇನ್ನೂ 3 ಅಥವಾ 4 ಖಾತೆಗಳನ್ನು ಖಾಲಿ ಉಳಿಸಿಕೊಳ್ಳಲಿದೆ. ಶನಿವಾರ ಅಥವಾ ಸೋಮವಾರ ಸಂಪುಟ ವಿಸ್ತರಣೆಯಾಗಲಿದೆ. ಅಧಿಕಾರ ಹಂಚಿಕೆಯಲ್ಲಿ ದೋಸ್ತಿ ಪಕ್ಷಗಳಲ್ಲಿ ಸಹಮತ ಮೂಡಿದ್ದು, ಕಾಂಗ್ರೆಸ್ ಗೆ 22 ಹಾಗೂ ಜೆಡಿಎಸ್ ಗೆ 12 ಖಾತೆಗಳು ಸಿಗಲಿದ್ದು, ಹಲವು ಹಿರಿಯ ನಾಯಕರನ್ನು ಕಾಂಗ್ರೆಸ್ ಸಂಪುಟದಿಂದ ದೂರವಿರಿಸಿ ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ,ಸಿ ವೇಣುಗೋಪಾಲ್ ಗುರುವಾರ ಜೆಡಿಎಸ್ ಮುಖಂಡ ಡ್ಯಾನಿಶ್ ಅಲಿ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಪರಮೇಶ್ವರ್ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಲವು ಹಿರಿಯ ಮುಖಂಡರು ಸಭೆ ನಡೆಸಿ ತಮ್ಮ ಮಧ್ಯೆ ಇಧ್ದ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಂಡಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಯಾವುದೇ ವಿಳಂಬವಿಲ್ಲ, ಜಮ್ಮು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಮಾಡುವುದಕ್ಕೆ ಮೂರು ತಿಂಗಳು ತೆಗೆದುಕೊಳ್ಳಲಾಯಿತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ, ಮುಂದಿನ 24 ಗಂಟೆಗಳಲ್ಲಿ ಎಲ್ಲಾ ವಿಷಯಗಳು ಬಗೆಹರಿಯಲಿವೆ ಎಂದು ವೇಣು ಗೋಪಾಲ್ ಹೇಳಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಖಾತೆ ಹಂಚಿಕೆ ಸಂಬಂಧವಾಗಿ ಸಮ್ಮತ ಸೂಚಿಸಿದ್ದು, ಸಂಪುಟ ವಿಸ್ತರಣೆ ಬಳಿಕ ಸಮನ್ವಯ ಸಮಿತಿ ರಚಿಸಲಾಗುವುಗುದು. ಈ ಸಂಬಂಧ ಶುಕ್ರವಾರ ಪತ್ರಿಕಾ ಗೋಷ್ಠಿ ಏರ್ಪಡಿಸಲಾಗುವುದು ಎಂದು ಸಿಎಂ ಕುಮಾರ ಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ ತನ್ನ ಹಿರಿಯ ನಾಯಕರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲಿದೆ ಎಂದು ತಿಳಿದು ಬಂದಿದೆ, ಶಿವಾನಂದ ಪಾಟೀಲ್, ಎನ್ ಎಚ್ ಶಿವಶಂಕರ ರೆಡ್ಡಿ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಬಿ ನಾಗೇಂದ್ರ, ಅಮರೇಗೌಡ ಬಯ್ಯಾಪುರ, ಆರ್ ನಾಗೇಂದ್ರ, ಯಶವಂತರಾಯಗೌಡ ವಿಟ್ಟಲಗೌಡ ಪಾಟೀಲ್, ಹಾಗೂ ಇಬ್ಬರು ಪಕ್ಷೇತರ ಶಾಸಕರಾದ ಎಚ್ ನಾಗೇಶ್ ಮತ್ತು ಆರ್, ಶಂಕರ್ ಅವರುಗಳಿಗೂ ಅವಕಾಶ ನೀಡಲಾಗುವುದು ಎಂದು ತಿಳಿದು ಬಂದಿದೆ.
ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಆರ್. ರಾಮಲಿಂಗಾ ರೆಡ್ಡಿ, ಎಂ,ಬಿ ಪಾಟೀಲ್, ಎಚ್.ಕೆ ಪಾಟೀಲ್, ರೋಷನ್ ಬೇಗ್, ಕೃಷ್ಣ ಬೈರೇಗೌಡ ಸೇರಿದಂತೆ ಹಲವರನ್ನು ಸಂಪುಟ ದಿಂದ ದೂರ ವಿಡಲು ನಿರ್ಧರಿಸಲಾಗಿದೆ, ಎಂ ಬಿ ಪಾಟೀಲ್ ಮತ್ತು ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ನ ಸಂಭಾವ್ಯ ಸಚಿವರು: ಡಿ,ಕೆ ಶಿವಕುಮಾರ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಎಸ್ ಆರ್ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ಅಮರೇಗೌಡ ಬಯ್ಯಾಪುರ, ಎಂ. ಕೃಷ್ಣಪ್ಪ, ಕೆ.ಜೆ ಜಾರ್ಜ್, ಬಿ ನಾಗೇಂದ್ರ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್,ಜೆಡಿಎಸ್ ಸಂಭಾವ್ಯ ಸಚಿವರು: ಎಚ್.ಡಿ ರೇವಣ್ಣ, ಎಚ್. ವಿಶ್ವನಾಥ್, ಜಿ.ಟಿ ದೇವೇಗೌಡ, ಸಿ.ಎನ್ ಬಾಲಕೃಷ್ಣ, ಸಾ.ರಾ ಮಹೇಶ್, ಗೋಪಾಲಯ್ಯ, ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಎಂ.ಕೆ ಶಿವಲಿಂಗೇಗೌಡ, ಶ್ರೀನಿವಾಸ್ (ವಾಸು) ಹಾಗೂ ಬಿಎಸ್ ಪಿ ಶಾಸಕ ಮಹೇಶ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.