ಸ್ವರಾ ಭಾಸ್ಕರ್ | PC : X
ಹೊಸದಿಲ್ಲಿ: ತಮ್ಮ ಎಕ್ಸ್ ಖಾತೆಯು ಶಾಶ್ವತವಾಗಿ ಅಮಾನತುಗೊಂಡಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಲು ನಟಿ ಸ್ವರಾ ಭಾಸ್ಕರ್ ಇನ್ಸ್ಟಾಗ್ರಾಮ್ ಮೊರೆ ಹೋಗಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯ ಸೇರಿದಂತೆ ತಮ್ಮ ಎರಡು ಟ್ವೀಟ್ ಗಳು ಹಕ್ಕುಸ್ವಾಮ್ಯತೆಯನ್ನು ಉಲ್ಲಂಘಿಸುತ್ತವೆ ಎಂಬ ಕಾರಣವನ್ನು ಮುಂದು ಮಾಡಿ ನನ್ನ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಖಾತೆಯ ಅಮಾನತು ಸಂಬಂಧ ತಾವು ಎಕ್ಸ್ ನಿಂದ ಸ್ವೀಕರಿಸಿರುವ ನೋಟಿಸ್ ಗಳ ಸ್ಕ್ರೀನ್ ಶಾಟ್ ಗಳನ್ನು ನಟಿ ಸ್ವರಾ ಭಾಸ್ಕರ್ ಪೋಸ್ಟ್ ಮಾಡಿದ್ದಾರೆ. “(ನೀವು ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ!!!) ಪ್ರಿಯ ಎಕ್ಸ್, ನನ್ನ ಎರಡು ಟ್ವೀಟ್ ಗಳ ಎರಡು ಚಿತ್ರಗಳನ್ನು ಹಕ್ಕುಸ್ವಾಮ್ಯತೆಯ ಉಲ್ಲಂಘನೆ ಎಂದು ಗುರುತಿಸಲಾಗಿದ್ದು, ಈ ಆಧಾರದಲ್ಲಿ ನನ್ನ ಎಕ್ಸ್ ಖಾತೆ ನಿಷ್ಕ್ರಿಯಗೊಳಿಸಲಾಗಿದೆ. ನಾನು ನನ್ನ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಹಾಗೂ ನಿಮ್ಮ ತಂಡವು ಶಾಶ್ವತ ಅಮಾನತನ್ನು ಅನುಮೋದಿಸಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
View this post on InstagramA post shared by Swara Bhasker (@reallyswara)
ಸ್ವರಾ ಭಾಸ್ಕರ್ ಹಕ್ಕು ಸ್ವಾಮ್ಯತೆ ಉಲ್ಲಂಘನೆಗಾಗಿ ಗುರುತಿಸಲಾಗಿರುವ ಪೋಸ್ಟ್ ಗಳನ್ನು ಉಲ್ಲೇಖಿಸಿದ್ದು, ಈ ಪೈಕಿ ಒಂದು ಟ್ವೀಟ್ ನಲ್ಲಿ ಭಾರತದಲ್ಲಿನ ಪ್ರಗತಿಪರ ಹೋರಾಟದಲ್ಲಿ ಜನಪ್ರಿಯ ಘೋಷಣೆಯಾಗಿರುವ “ಗಾಂಧಿ ನಮಗೆ ನಾಚಿಕೆಯಾಗುತ್ತಿದೆ, ನಿಮ್ಮ ಹಂತಕರೂ ಇನ್ನೂ ಜೀವಂತವಾಗಿದ್ದಾರೆ” ಎಂಬುದನ್ನು ಹಿಂದಿ ದೇವನಾಗರಿ ಲಿಪಿಯಲ್ಲಿ ಕಿತ್ತಳೆ ಬಣ್ಣದ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಇದರಲ್ಲಿ ಯಾವುದೇ ಹಕ್ಕುಸ್ವಾಮ್ಯತೆ ಉಲ್ಲಂಘನೆಯಾಗಿರಲಿಲ್ಲ. ಬದಲಿಗೆ ಇದು ಆಧುನಿಕ ಪಟ್ಟಣ ಜಾನಪದ ಸದೃಶ ನಾಣ್ಣುಡಿಯಾಗಿತ್ತು ಎಂದು ಅವರು ವಾದಿಸಿದ್ದಾರೆ.
ಇದರೊಂದಿಗೆ, ನನ್ನ ಸ್ವಂತ ಪುತ್ರಿಯ ಭಾವಚಿತ್ರವು ಅದು ಹೇಗೆ ಹಕ್ಕು ಸ್ವಾಮ್ಯತೆಯ ಉಲ್ಲಂಘನೆಯಾಗುತ್ತದೆ ಎಂದೂ ಅವರು ಪ್ರಶ್ನಿಸಿದ್ದಾರೆ.