PC : X \ @abirghoshal
ಕೋಲ್ಕತಾ: ತರಗತಿ ಕೋಣೆಯಲ್ಲಿ ವಧುವಿನ ವೇಷ ಧರಿಸಿ ತನ್ನ ವಿದ್ಯಾರ್ಥಿಯನ್ನು ‘ಮದುವೆ’ಯಾದ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಕಾಲೇಜೊಂದರ ಮಹಿಳಾ ಪ್ರೊಫೆಸರ್ ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಪ್ರೊಫೆಸರ್ ಮತ್ತು ಮೊದಲ ವರ್ಷದ ವಿದ್ಯಾರ್ಥಿ ಹಾರ ವಿನಿಮಯ ಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿ ತನ್ನ ಶಿಕ್ಷಕಿಯ ಹಣೆಗೆ ತಿಲಕ ಇಡುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಅಣಕು ಮದುವೆಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ತರಗತಿ ನಡೆಯುತ್ತಿರುವಾಗ, ಈ ಪ್ರೊಫೆಸರ್ ಮತ್ತು ವಿದ್ಯಾರ್ಥಿ ಸಾಂಕೀತಿಕವಾಗಿ ‘ಮದುವೆ’ಯಾದರು. ಸಾಂಪ್ರದಾಯಿಕ ಪದ್ಧತಿಗಳು ಮತ್ತು ವಿಧಿವಿಧಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಈ ಅಣಕು ಮದುವೆಯನ್ನು ಪ್ರೊಫೆಸರ್ ಏರ್ಪಡಿಸಿದ್ದರು ಎಂಬುದಾಗಿ ವರದಿಯಾಗಿದೆ. ಆದರೆ, ಈ ‘ಮದುವೆ’ಯ ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ ಮತ್ತು ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ.
ಘಟನೆಯು ವಿವಾದವಾಗುತ್ತಿರುವಂತೆಯೇ, ಎಚ್ಚೆತ್ತುಕೊಂಡ ಕಾಲೇಜು ಆಡಳಿವು ಘಟನೆಯ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ವಿಚಾರಣಾ ಆಯೋಗವೊಂದನ್ನು ರಚಿಸಿದೆ. ತನಿಖೆ ಮುಗಿಯುವವರೆಗೆ ಸಂಬಂಧಪಟ್ಟ ಪ್ರೊಫೆಸರ್‌ರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಸದ್ಯಕ್ಕೆ ಕಾಲೇಜಿಗೆ ಬರುವುದು ಬೇಡ ಎಂಬುದಾಗಿ ಸಂಬಂಧಿತ ವಿದ್ಯಾರ್ಥಿಗೂ ಸೂಚಿಸಲಾಗಿದೆ.
ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳ ಭಾಗವಾಗಿ ಈ ಅಣಕು ಮದುವೆಯನ್ನು ಏರ್ಪಡಿಸಲಾಗಿತ್ತು ಎಂಬ ವಿವರಣೆಯನ್ನು ಪ್ರೊಫೆಸರ್ ನೀಡಿದ್ದಾರೆ. ಆ ಚಟುವಟಿಕೆಯಲ್ಲಿ ಯಾವುದೇ ದುರ್ನಡತೆ ಅಥವಾ ಅನೈತಿಕ ಉದ್ದೇಶವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆಂತರಿಕ ದಾಖಲೆಗಾಗಿ ವೀಡಿಯೊಗಳನ್ನು ತೆಗೆಯಲಾಗಿತ್ತು. ಆದರೆ ತನ್ನ ಮನಃಶಾಸ್ತ್ರ ವಿಭಾಗದ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ವೀಡಿಯೊಗಳನ್ನು ಸೋರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
►ಸಾರ್ವಜನಿಕರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಕ್ರಮ: ಉಪ ಕುಲಪತಿ
ಪ್ರೊಫೆಸರ್‌ರ ಹೇಳಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಮೌಲಾನಾ ಅಬುಲ್ ಕಲಾಮ್ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯದ ಉಸ್ತುವಾರಿ ಉಪ ಕುಲಪತಿ ತಪಸ್ ಚಕ್ರವರ್ತಿ ಹೇಳಿದ್ದಾರೆ. ಆದರೆ, ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಅವರು ಪಿಟಿಐಗೆ ತಿಳಿಸಿದರು.
‘‘ಅದೊಂದು ಶೈಕ್ಷಣಿಕ ಪ್ರಾಜೆಕ್ಟ್ ಆಗಿತ್ತು ಮತ್ತು ಆ ವೀಡಿಯೊಗಳನ್ನು ಹೊರಗಿನ ಪ್ರಸಾರಕ್ಕೆ ಆಗಿರಲಿಲ್ಲ ಎಂಬುದಾಗಿ ಪ್ರೊಫೆಸರ್ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ವೀಡಿಯೊಗಳು ವೈರಲ್ ಆಗಿ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಸಮಿತಿಯು ವರದಿಯನ್ನು ಸಲ್ಲಿಸುವವರೆಗೆ ರಜೆಯಲ್ಲಿ ಹೋಗುವಂತೆ ಅವರಿಗೆ ತಿಳಿಸಲಾಗಿದೆ’’ ಎಂದು ಅವರು ಹೇಳಿದರು.