ಹೊಸದಿಲ್ಲಿ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ದಿಲ್ಲಿಯ ಕಪುರ್ತಲಾದಲ್ಲಿರುವ ನಿವಾಸಕ್ಕೆ ಶೋಧ ನಡೆಸಲು ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಗುರುವಾರ ಭೇಟಿ ನೀಡಿದೆ ಎಂದು ಆಮ್ ಆದ್ಮಿ ಪಕ್ಷವು ಗುರುವಾರ ಆರೋಪಿಸಿದೆ.
ಮಾನ್ ಅವರ ಕಪುರ್ತಲಾ ನಿವಾಸದಲ್ಲಿ ಶೋಧ ಕಾರ್ಯ ನಡೆಸಲು ಚುನಾವಣಾ ಆಯೋಗದ ಅಧಿಕಾರಿಗಳ ಆಗಮಿಸಿದೆ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ. ಕಾಪರ್ನಿಕಸ್ ಮಾರ್ಗದಲ್ಲಿರುವ ಕಪುರ್ತಲಾ ಮನೆಯ ಹೊರಗಿನ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ, ಹಣ ವಿತರಿಸಲಾಗುತ್ತಿರುವ ಬಗ್ಗೆ ದೂರು ಬಂದಿದೆ. ಶೋಧ ಕಾರ್ಯ ನಡೆಸಲು ತಂಡವು ಅನುಮತಿಗಾಗಿ ಕಾಯುತ್ತಿದೆ ಎಂದು ಹೇಳಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿಲ್ಲಿ ಮುಖ್ಯಮಂತ್ರಿ ಅತಿಶಿ, ಪಂಜಾಬ್ ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ನಡೆಸಲು ಚುನಾವಣಾ ಆಯೋಗದ ತಂಡ ಆಗಮಿಸಿದೆ ಎಂದು ಹೇಳಿ ಬಿಜೆಪಿಯನ್ನು ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿಯಿಂದ ಜನರಿಗೆ ಹಣ, ಶೂಗಳು, ಚಪ್ಪಲಿಗಳು ಮತ್ತು ಬೆಡ್ ಶೀಟ್ ಗಳನ್ನು ಬಹಿರಂಗವಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ ಪೊಲೀಸರು ಅದನ್ನು ನೋಡುವುದಿಲ್ಲ. ಚುನಾಯಿತ ಮುಖ್ಯಮಂತ್ರಿಯ ನಿವಾಸಕ್ಕೆ ದಾಳಿ ಮಾಡಲು ಬಂದಿದ್ದಾರೆ ಎಂದು ದಿಲ್ಲಿ ಸಿಎಂ ಅತಿಷಿ ಆರೋಪಿಸಿದ್ದಾರೆ.
“ಪಂಜಾಬ್ ಸರ್ಕಾರ” ಎಂಬ ಸ್ಟಿಕ್ಕರ್ ಮತ್ತು ಪಂಜಾಬ್ ರಾಜ್ಯದ ನೋಂದಣಿ ಸಂಖ್ಯೆಯನ್ನು ಹೊಂದಿರುವ ಖಾಸಗಿ ವಾಹನವನ್ನು ದಿಲ್ಲಿ ಪೊಲೀಸರು ವಶಪಡಿಸಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಪಂಜಾಬ್ ಭವನದ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಮದ್ಯ, ನಗದು ಮತ್ತು ಎಎಪಿಯ ಚುನಾವಣಾ ಪ್ರಚಾರ ಸಾಮಗ್ರಿಗಳು ಪತ್ತೆಯಾದ ಬಳಿಕ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.