EBM News Kannada
Leading News Portal in Kannada

Fact Check: ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಒಡೆದ ವ್ಯಕ್ತಿಗೆ ನ್ಯಾಯಾಲಯದಲ್ಲಿ ಥಳಿತ?, ಇಲ್ಲಿ ಈ ವೀಡಿಯೊ ರಾಯ್ಪುರದ್ದು

0


Claim: ಅಂಬೇಡ್ಕರವ ಮೂರ್ತಿಗೆ ಧಕ್ಕೆ ಮಾಡಿದ ವ್ಯಕ್ತಿಗೆ ಪಂಜಾಬ್ ಕೋರ್ಟಿನಲ್ಲಿ ವಕೀಲರು ಥಳಿಸಿದ್ದಾರೆ.

Fact: ಛತ್ತೀಸ್‌ಗಢದ ರಾಯ್‌ಪುರ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಯುವಕನಿಗೆ ವಕೀಲರೇ ಥಳಿಸಿದ ಘಟನೆಯ ವೀಡಿಯೊ ಇದಾಗಿದೆ.

ಜನವರಿ 26 ರಂದು ಪಂಜಾಬ್‌ನ ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಮೊಗದ ನಿವಾಸಿ ಆಕಾಶದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಇದೀಗ ಈ ಘಟನೆ ನಡೆದ ಮೂರು ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ವಕೀಲರು ನ್ಯಾಯಾಲಯದ ಆವರಣದಲ್ಲಿ ಪೊಲೀಸರ ಎದುರೇ ವ್ಯಕ್ತಿಯನ್ನು ಥಳಿಸುತ್ತಿರುವುದು ಕಾಣಬಹುದು. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಕ್ಕಾಗಿ ವಕೀಲರು ಆರೋಪಿಗಳನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಜನವರಿ 28, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಂಜಾಬಿನ ಅಮೃತ್ಸರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಟ್ಯಾಚ್ಯುಗೆ ಸುತ್ತಿಗೆಯಿಂದ ಹೊಡೆದವನನ್ನು ಸ್ಪಾಟ್ನಲ್ಲೇ ಬೆತ್ತಲೆಗೊಳಿಸಿ ಹೊಡೆದಿರುವ ವಿಡಿಯೋ’’ ಎಂದು ಬರೆದುಕೊಂಡಿದ್ದಾರೆ.

PC: newsmeter.in

ಮತ್ತೊಬ್ಬ ಬಳಕೆದಾರ ಇದೇ ವೀಡಿಯೊವನ್ನು ಅಪ್ಲೋಡ್ ಮಾಡಿಕೊಂಡು, ‘‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವ ಮೂರ್ತಿ ಧಕ್ಕೆ ಮಾಡಿದ ವ್ಯಕ್ತಿಗೆ ಬಿಸಿ ಬಿಸಿ ಕಜ್ಜಾಯ ಪಂಜಾಬ್ ಕೋರ್ಟಿನಲ್ಲಿ ವಕೀಲರು ಹಾಗೂ ಜನರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪ್ರತಿಮೆ ಹಾಗೂ ಸಂವಿಧಾನ ಮುಟ್ಟಿದರೆ ಉಳಿಗಾಲವಿಲ್ಲ ಎಚ್ಚರಿಕೆ’’ ಎಂದು ಬರೆದಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಛತ್ತೀಸ್‌ಗಢದ ರಾಯ್‌ಪುರ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಯುವಕನಿಗೆ ವಕೀಲರೇ ಥಳಿಸಿದ ಘಟನೆಯ ವೀಡಿಯೊ ಇದಾಗಿದೆ. ಅಂಬೇಡ್ಕರ್ ಪ್ರತಿಮೆ ಒಡೆದು ಹಾಕಿದ ಘಟನೆಗೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೀಡಿಯೊಗೆ ಸಂಬಂಧಿಸಿದ ಕೆಲವು ಸುದ್ದಿಗಳ ಲಿಂಕ್‌ಗಳು ಸಿಕ್ಕಿವೆ. ಜನವರಿ 17, 2025 ಝೀ ನ್ಯೂಸ್ ವೈರಲ್ ವೀಡಿಯೊದಲ್ಲಿರುವ ಸ್ಕ್ರೀನ್ ಶಾಟ್​ನೊಂದಿಗೆ ‘‘ರಾಯ್‌ಪುರ ನ್ಯಾಯಾಲಯದಲ್ಲಿ ಗಲಾಟೆ, ಸೇಡು ತೀರಿಸಿಕೊಳ್ಳಲು ಬಂದ ವಕೀಲರು, ಪೊಲೀಸರ ಮುಂದೆ ಥಳಿತ’ ಎಂಬ ಹೆಡ್​ಲೈನ್​ನೊಂದಿಗೆ ಸುದ್ದಿ ಪ್ರಕಟಿಸಿದೆ.

ಇದರಲ್ಲಿ ಮಾಹಿತಿಯ ಪ್ರಕಾರ, ‘‘ರಾಯ್‌ಪುರದ ನ್ಯಾಯಾಲಯದ ಮುಂದೆ ವಕೀಲರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಇತರೆ ವಕೀಲರು ಆರೋಪಿಯನ್ನು ತೀವ್ರವಾಗಿ ಥಳಿಸಿದ್ದಾರೆ. ಆರೋಪಿ ಅಜಯ್ ಸಿಂಗ್ ವಕೀಲ ದೀರ್ಗೇಶ್ ಶರ್ಮಾಗೆ ಕಪಾಳಮೋಕ್ಷ ಮಾಡಿದ್ದು, ನಂತರ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಖಮ್ತರಾಯ್ ಪೊಲೀಸ್ ಠಾಣೆಯಲ್ಲಿ ವಕೀಲರು ಗದ್ದಲ ಸೃಷ್ಟಿಸಿದ್ದರು. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೊರಗೆ ಕರೆತಂದ ಕೂಡಲೇ ಆರೋಪಿಯನ್ನು ನೋಡಿದ ವಕೀಲರು ಆಕ್ರೋಶಗೊಂಡು ತೀವ್ರವಾಗಿ ಥಳಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿರುವುದು ಕಂಡು ಬಂತು’’ ಎಂದು ಬರೆಯಲಾಗಿದೆ.

PC: newsmeter.in

ನವಭಾರತ್ ಟೈಮ್ಸ್‌ನ ಸುದ್ದಿಗಳ ಪ್ರಕಾರ, ‘‘ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿ ಅಜಯ್ ಸಿಂಗ್ ಅವರನ್ನು ಬಿಗಿ ಭದ್ರತೆಯ ನಡುವೆ 17 ಜನವರಿ 2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಯಿತು. ಈ ವೇಳೆ ವಕೀಲರು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನೂರಾರು ವಕೀಲರು ಆರೋಪಿಯನ್ನು ಸುತ್ತುವರಿದು ಥಳಿಸಿದ್ದಾರೆ. ಪೊಲೀಸರು ಹೇಗೋ ಮಧ್ಯಪ್ರವೇಶಿಸಿ ಆರೋಪಿಯನ್ನು ಅಲ್ಲಿಂದ ಕರೆದೊಯ್ದರು’’ ಎಂದು ಬರೆಯಲಾಗಿದೆ.

IBC24 ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಘಟನೆಗೆ ಸಂಬಂಧಿಸಿದ ವೀಡಿಯೊ ಬುಲೆಟಿನ್ ಅನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ವೈರಲ್ ವೀಡಿಯೊದ ದೃಶ್ಯಗಳನ್ನು ನೋಡಬಹುದು. ರಾಯ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿಯನ್ನು ವಕೀಲರು ಥಳಿಸಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅಮೃತಸರದಲ್ಲಿ ಬಾಬಾ ಸಾಹೇಬರ ಪ್ರತಿಮೆಯನ್ನು ಒಡೆಯಲು ಯತ್ನಿಸಿದ ಯುವಕನಿಗೆ ಥಳಿಸಿದ ವೀಡಿಯೋ ಇದಲ್ಲ, ನ್ಯಾಯಾಲಯದಲ್ಲಿ ವಕೀಲರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅಜಯ್ ಸಿಂಗ್ ಎಂಬಾತನಿಗೆ ಥಳಿಸಿದ ಘಟನೆಯ ವೀಡಿಯೊ ಇದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಅಂಬೇಡ್ಕರವ ಮೂರ್ತಿಗೆ ಧಕ್ಕೆ ಮಾಡಿದ ವ್ಯಕ್ತಿಗೆ ಪಂಜಾಬ್ ಕೋರ್ಟಿನಲ್ಲಿ ವಕೀಲರು ಥಳಿಸಿದ್ದಾರೆ.

Claimed By:Facebook User

Claim Reviewed By:NewsMeter

Claim Source:Social Media

Claim Fact Check:False

Fact:ಛತ್ತೀಸ್‌ಗಢದ ರಾಯ್‌ಪುರ ಕೋರ್ಟ್‌ನಲ್ಲಿ ವಕೀಲರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಯುವಕನಿಗೆ ವಕೀಲರೇ ಥಳಿಸಿದ ಘಟನೆಯ ವೀಡಿಯೊ ಇದಾಗಿದೆ.

Leave A Reply

Your email address will not be published.