ಭೋಪಾಲ್ : ದುಷ್ಕರ್ಮಿಯೋರ್ವ ಮೂವರು ಮಕ್ಕಳಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ರತ್ಲಾಮ್ ಜಿಲ್ಲೆಯ ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತಸಾಗರ್ ತಲಾಬ್ನಲ್ಲಿ ನಿರ್ಮಾಣ ಹಂತದಲ್ಲಿರುವ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಥಳಿತಕ್ಕೊಳಗಾದ ಮೂವರು ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ.
►ವೈರಲ್ ವೀಡಿಯೊದಲ್ಲಿ ಏನಿದೆ?
ಪಾರ್ಕ್ ನಲ್ಲಿ ಕುಳಿತುಕೊಂಡಿದ್ದ ಮೂವರು ಮಕ್ಕಳಿಗೆ ದುಷ್ಕರ್ಮಿಯೋರ್ವ ಮೊದಲು ಕೈಯಿಂದ ಮತ್ತು ಆ ಬಳಿಕ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಓರ್ವ ಬಾಲಕ ನೋವು ತಡೆಯಲಾರದೆ ʼಅಲ್ಲಾ(ಅಲ್ಲಾಹು)ʼ ಎಂದು ಕೂಗಿದ್ದಾನೆ. ಆ ಬಳಿಕ ದುಷ್ಕರ್ಮಿ ಮಕ್ಕಳಿಗೆ ಮತ್ತಷ್ಟು ಬಲವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಹೆದರಿದ ಓರ್ವ ಬಾಲಕ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದಾನೆ. ಆ ಬಳಿಕ ಮತ್ತಷ್ಟು ಜೋರಾಗಿ ʼಜೈ ಶ್ರೀ ರಾಮ್ʼ ಘೋಷಣೆ ಕೂಗುವಂತೆ ಮೂವರು ಮಕ್ಕಳಿಗೆ ಆರೋಪಿ ಚಪ್ಪಲಿಯಿಂದ ಬಲವಾಗಿ ಹಲ್ಲೆ ನಡೆಸಿದ್ದಾನೆ. ಮಕ್ಕಳು ತಮ್ಮನ್ನು ಹೊಡೆಯುವುದನ್ನು ನಿಲ್ಲಿಸುವಂತೆ ದುಷ್ಕರ್ಮಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು, ಆದರೆ ಆರೋಪಿ ನಿರ್ದಾಕ್ಷಿಣ್ಯವಾಗಿ ತನ್ನ ಕೃತ್ಯವನ್ನು ಮುಂದುವರಿಸಿದ್ದನು. ಈ ಕುರಿತ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಇನ್ನೋರ್ವ ವೈರಲ್ ಮಾಡಿದ್ದಾನೆ.
ವೀಡಿಯೊ ವೈರಲ್ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ತಂಡವನ್ನು ರಚಿಸಿದ್ದಾರೆ. ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ, ನಿಂದನೆ, ಕೊಲೆ, ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.