ಚೆನ್ನೈ: ಈಗ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಹೆಚ್ಚುವರಿ ಪಂದ್ಯವನ್ನು ಆಡಿದ ನಂತರ ಸರ್ಫರಾಝ್ ಖಾನ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾವನ್ನು ಸೋಮವಾರ ಸೇರಿಕೊಂಡರು.
ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳು ಕೊನೆಗೊಂಡ ತಕ್ಷಣ ಮುಂಬರುವ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿತ್ತು. ಆಗ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಸಹಿತ ಇತರರು ರಾಷ್ಟ್ರೀಯ ಶಿಬಿರವನ್ನು ಸೇರಿದ್ದರು. ಸರ್ಫರಾಝ್‌ಗೆ ಇನ್ನೂ ಒಂದು ಪಂದ್ಯವನ್ನು ಆಡುವಂತೆ ಆಯ್ಕೆಗಾರರು ತಿಳಿಸಿದ ನಂತರ ಅವರು ಇಂಡಿಯಾ ಬಿ ಪರ ಆಡಿ 16 ರನ್ ಗಳಿಸಿದ್ದರು.
ಸರ್ಫರಾಝ್ ತನ್ನ ಸಹ ಆಟಗಾರರಿಗಿಂತ ತಡವಾಗಿ ತಂಡವನ್ನು ಸೇರಿಕೊಂಡಿರುವ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ನಲ್ಲಿ ರಾಹುಲ್ ಅವರು 26ರ ಹರೆಯದ ಸರ್ಫರಾಝ್‌ರನ್ನು ಹಿಂದಿಕ್ಕಿ ಮಧ್ಯಮ ಸರದಿಯಲ್ಲಿ ಆಡುವ ಸಾಧ್ಯತೆಯಿದೆ. ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಎ ಪರ 37 ಹಾಗೂ 57 ರನ್ ಗಳಿಸಿದ್ದ ರಾಹುಲ್ ಸರಣಿಯಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದರು.
ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ನಂತರ ಈ ವರ್ಷಾರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಸರಣಿಯಿಂದ ಹೊರಗುಳಿದಿದ್ದ ರಾಹುಲ್ ಬದಲಿಗೆ ಸರ್ಫರಾಝ್ ತಂಡದಲ್ಲಿ ಸ್ಥಾನ ಪಡೆದಿದ್ದರು. ರಾಜ್‌ಕೋಟ್‌ನಲ್ಲಿ ನಡೆದಿದ್ದ 3ನೇ ಟೆಸ್ಟ್ ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಸರ್ಫರಾಝ್ 5 ಇನಿಂಗ್ಸ್ ಗಳಲ್ಲಿ 50ರ ಸರಾಸರಿಯಲ್ಲಿ 200 ರನ್ ಗಳಿಸಿದ್ದರು.