960 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲ್ಪಟ್ಟ ‘ಸೌಂಡ್ ಪ್ರೂಫ್ ಹೈವೇʼಯ ಸೌಂಡ್ ಈಗ ಎಲ್ಲಾ ಕಡೆಗಳಿಂದ ಕೇಳುತ್ತಿದೆ. ಬೆಕ್ಕು 100 ತರಹದ ಧ್ವನಿ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಈ ಹೈವೆ ಈಗ ಅದಕ್ಕಿಂತಲೂ ಹೆಚ್ಚು ಸದ್ದು ಮಾಡುತ್ತಿದೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಏಷ್ಯಾದ ಹೆಸರಾಂತ ಧ್ವನಿ ನಿರೋಧಕ ಸೇತುವೆಯ ಒಂದು ಭಾಗವು ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿದೆ. ಸೇತುವೆಯ ಹಲವು ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕೆಲವು ಭಾಗಗಳು ಮುರಿದಿವೆ. ಇದರಿಂದ ರಸ್ತೆಯ ಒಂದು ಬದಿಯನ್ನು ದುರಸ್ತಿಗಾಗಿ ಮುಚ್ಚಲಾಗಿದೆ.
ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ಏಷ್ಯಾದ ಪ್ರಪ್ರಥಮ ಧ್ವನಿ ನಿರೋಧಕ ಸೇತುವೆ ಹಾನಿಗೊಂಡಿದೆ. ಖಾಸಗಿ ಕಂಪನಿಯು ಕನಿಷ್ಠ 10 ವರ್ಷಗಳವರೆಗೆ ಉತ್ತಮ ಗುಣಮಟ್ಟ ಇರಲಿದೆ ಎಂದು ಖಾತರಿ ನೀಡಿತ್ತು. ಆದರೆ ಈಗ ಹಾನಿಯನ್ನು ನೋಡಿದ ನಂತರ ಜನ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸಲು ಖವಾಸಾ-ಮೊಹಗಾಂವ್ ಮಾರ್ಗದಲ್ಲಿ ನಿರ್ಮಿಸಲಾದ 29 ಕಿಲೋಮೀಟರ್ ಉದ್ದದ ಈ ಸೇತುವೆಯನ್ನು ಖಾಸಗಿ ಕಂಪನಿಯು 960 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು. ಈ ಸೇತುವೆ ಉದ್ಘಾಟನೆಗೊಂಡಾಗ ಇದರ ಡ್ರೋನ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕೇಂದ್ರ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಸ್ವತಃ ನಿರ್ಮಾಣದ ವೇಳೆ ಎರಡು ಭಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕಂಪನಿಯು ಕನಿಷ್ಠ 10 ವರ್ಷಗಳವರೆಗೆ ಉತ್ತಮ ಗುಣಮಟ್ಟ ಇರಲಿದೆ ಎಂದು ಖಾತರಿ ನೀಡಿತ್ತು, ಆದರೆ ಕೇವಲ ಮೂರೇ ವರ್ಷಗಳಲ್ಲಿ ರಸ್ತೆಯಲ್ಲಿ ಬಿರುಕು ಕಂಡು ಬಂದಿದೆ. ನಮ್ಮ ರಾಜ್ಯದ ರಸ್ತೆಗಳು ಆಮೇರಿಕಾವನ್ನು ಹಿಂದಿಕ್ಕಿವೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಈ ಘಟನೆ ನಡೆದಿದೆ. ಭಾರತದ ಮಾತ್ರವಲ್ಲ ಏಷ್ಯಾದ ಮೊಟ್ಟಮೊದಲ ‘ಸೌಂಡ್ ಪ್ರೂಫ್ ಹೈವೇ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಷ್ಟ್ರೀಯ ಹೆದ್ದಾರಿಯು ಅದರ ಗುಣಮಟ್ಟದ ಬಗ್ಗೆ ಈಗ ಭಾರೀ ಟೀಕೆಗೆ ಗುರಿಯಾಗುತ್ತಿದೆ.
960 ಕೋಟಿ ರೂಪಾಯಿ ಅಂದರೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲ್ಪಟ್ಟ ಹೈವೆ ನಿರ್ಮಾಣವಾದ ಮೂರು ವರ್ಷಗಳಲ್ಲೇ ಹಾಳಾದ ಸ್ಥಿತಿಗೆ ತಲುಪಿದ್ದು, ವಾಹನಗಳು ಸಂಚರಿಸಲು ಪರದಾಡುವಂತಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಅಧೀನದಲ್ಲಿರುವ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ ಅಥವಾ ಎನ್ಎಚ್ಎಐ ಮೇಲ್ವಿಚಾರಣೆಯಲ್ಲಿ ಈ ಹೆದ್ದಾರಿ ನಿರ್ಮಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ 44, ಭಾರತದ ಅತಿ ಉದ್ದದ ಹೆದ್ದಾರಿ. ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ 4,112 ಕಿಲೋಮೀಟರ್ಗಳನ್ನು ಈ ಹೆದ್ದಾರಿ ವ್ಯಾಪಿಸಿದೆ. ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳ ಶಬ್ದದಿಂದ ವನ್ಯಜೀವಿಗಳನ್ನು ರಕ್ಷಿಸಲು ಸಿಯೋನಿ ಮತ್ತು ನಾಗ್ಪುರ ನಡುವೆ ಇರುವ ಪೆಂಚ್ ಟೈಗರ್ ರಿಸರ್ವ್ ಬಳಿ ‘ಧ್ವನಿ ನಿರೋಧಕ’ ಸೇತುವೆಯನ್ನು ನಿರ್ಮಿಸಲಾಗಿತ್ತು.
ಧ್ವನಿ ನಿರೋಧಕ ರಚನೆಯು ಯಾವುದೇ ವಾಹನದ ಶಬ್ದವು ಕೆಳಗಿನ ನೆಲವನ್ನು ತಲುಪದಂತೆ ಖಚಿತಪಡಿಸುತ್ತದೆ, ಸುತ್ತಮುತ್ತಲಿನ ದಟ್ಟವಾದ ಕಾಡುಗಳಲ್ಲಿ ವನ್ಯಜೀವಿಗಳಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಇದರಿಂದ ಸಹಾಯವಾಗುತ್ತದೆ ಎಂದು ಹೇಳಲಾಗಿತ್ತು . ಹೆಚ್ಚುವರಿಯಾಗಿ, ಪ್ರಾಣಿಗಳ ಸುರಕ್ಷಿತ ಚಲನೆಗೆ ಅನುಕೂಲವಾಗುವಂತೆ ಪ್ರಾಣಿಗಳ 14 ಅಂಡರ್ಪಾಸ್ಗಳು ಮತ್ತು ಲೈಟ್ ರಿಡ್ಯೂಸರ್ಗಳನ್ನು ಈ ರಸ್ತೆಯಲ್ಲಿ ಸ್ಥಾಪಿಸಲಾಗಿದೆ.
ಆದಾಗ್ಯೂ, ಸೇತುವೆಯು ನಿರ್ಮಾಣವಾದ ಕೇವಲ ಮೂರು ವರ್ಷಗಳಲ್ಲಿ, ಭಾರೀ ಮಳೆಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ಹದಗೆಡಲು ಪ್ರಾರಂಭಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲೂ ಇದೇ ರೀತಿಯ ವರದಿಗಳು ಬಂದಿದ್ದವು. ನಮ್ಮ ರಾಜ್ಯದ ರಸ್ತೆಗಳು ಅಮೇರಿಕಾದ ರಸ್ತೆಗಳಿಗಿಂತ ಚೆನ್ನಾಗಿವೆ ಎಂದು ಮಧ್ಯ ಪ್ರದೇಶದ ಈ ಹಿಂದಿನ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 2018 ರಲ್ಲಿ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.
ಮೋದಿ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಈ ಸರಕಾರದ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳು, ಸೇತುವೆಗಳು, ಅಂಡರ್ ಪಾಸ್ ಗಳು, ಟನೆಲ್ ಗಳು, ಪ್ರತಿಮೆಗಳು , ಕಟ್ಟಡಗಳು, ಅಲ್ಲಲ್ಲಿ ಕುಸಿಯುತ್ತಾ, ಗುಂಡಿ ಬೀಳುತ್ತಾ, ಸೋರುತ್ತಾ, ಉರುಳುತ್ತಾ ಸುದ್ದಿಯಾಗುತ್ತಲೇ ಇವೆ. ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಭಾರೀ ಪ್ರಚಾರ ನೀಡಿ ಸ್ವತಃ ಮೋದಿಜಿ ಬಂದು ಉದ್ಘಾಟಿಸುವ ಹಲವು ಯೋಜನೆಗಳದ್ದೂ ಇದೇ ಕತೆ. ಈಗ ಈ ಸೌಂಡ್ ಪ್ರೂಫ್ ಹೆದ್ದಾರಿಯ ದುರಸ್ತಿ ಕಾರ್ಯವನ್ನು ತ್ವರಿತವಾಗಿ ನಡೆಸಲಾಗುತ್ತಿದ್ದು, ಫಲಕಗಳನ್ನು ಬದಲಾಯಿಸಲಾಗುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತ ನಿರ್ವಹಣೆಯನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
NH-1A, NH-1, NH-2, NH-3, NH-75, NH-26, ಮತ್ತು NH – 7 ಸೇರಿದಂತೆ ಏಳು ಪ್ರಮುಖ ಹೆದ್ದಾರಿಗಳ ಮೂಲಕ ಹಾದುಹೋಗುವ, ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವಲ್ಲಿ NH-44 ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಒಟ್ಟಾಗಿ ಭಾರತದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದೆ.