ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡ ಸೆಪ್ಟಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದೆ.
ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಚಿಪಾಕ್ ಕ್ರೀಡಾಂಗಣಗದಲ್ಲಿ ತೀವ್ರ ತರಬೇತಿ ನಡೆಸಿದ್ದು, 16 ಸದಸ್ಯ ತಂಡದ ಪ್ರತಿಯೊಬ್ಬರೂ ಪ್ರಾಕ್ಟೀಸ್ ವೇಳೆ ಉಪಸ್ಥಿತರಿದ್ದರು.
ವಿರಾಟ್ ಕೊಹ್ಲಿ ಒಳಗೊಂಡ ಬ್ಯಾಟರ್‌ಗಳ ಮೊದಲ ತಂಡ ನೆಟ್‌ಗೆ ಬೇಗನೆ ಆರಂಭಿಸಿತು. ಕೊಹ್ಲಿ ಅವರೊಂದಿಗೆ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇದ್ದರು. ಈ ಇಬ್ಬರು ನೆಟ್ ಪ್ರಾಕ್ಟೀಸ್ ವೇಳೆ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಹಾಗೂ ಆಫ್ ಸ್ಪಿನ್ನರ್ ಆರ್.ಅಶ್ವಿನ್‌ರನ್ನು ಎದುರಿಸಿದರು. ಅಶ್ವಿನ್ 101ನೇ ಪಂದ್ಯ ಆಡಲು ಸಜ್ಜಾಗುತ್ತಿದ್ದಾರೆ.
ಆ ನಂತರ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ಸರ್ಫರಾಝ್ ಖಾನ್ ನೆಟ್‌ಗೆ ಆಗಮಿಸಿದರು. ಅನಂತಪುರದಲ್ಲಿ ನಡೆದಿದ್ದ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾಗವಹಿಸಿದ್ದ ನಂತರ ಸರ್ಫರಾಝ್ ಸೋಮವಾರವಷ್ಟೇ ಚೆನ್ನೈಗೆ ಆಗಮಿಸಿದ್ದರು.
ರೋಹಿತ್ ಇದೇ ವೇಳೆ, ಬಾಂಗ್ಲಾದೇಶ ತಂಡದ ಬಲಿಷ್ಠ ಸ್ಪಿನ್ ಬೌಲಿಂಗ್ ದಾಳಿಯನ್ನು ಮನಸ್ಸಿನಲ್ಲಿಟುಕೊಂಡು ಸ್ಪಿನ್ನರ್‌ಗಳ ಎದುರು ಆಡುವತ್ತ ಗಮನ ಹರಿಸಿದರು.
ಆಲ್‌ರೌಂಡರ್ ರವೀಂದ್ರ ಜಡೇಜ, ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಹಾಗೂ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಸಹಿತ ತಂಡದ ಇತರ ಆಟಗಾರರು ಸ್ಥಳೀಯ ಬೌಲರ್‌ಗಳ ಜೊತೆ ಬ್ಯಾಟಿಂಗ್ ಅಭ್ಯಾಸ ನಡೆಸಿದರು.