ರಾಂಚಿ: ಪೊಲೀಸ್ ಪೇದೆಗಳ ನೇಮಕಾತಿ ಅಭಿಯಾನದ ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ 12 ಮಂದಿ ಅಭ್ಯರ್ಥಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ದೈಹಿಕ ಸಾಮರ್ಥ್ಯ ಪರೀಕ್ಷೆಯ ಮಾನದಂಡಗಳನ್ನು ಸಡಿಲಿಸಲು ಜಾರ್ಖಂಡ್ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ 10 ಕಿಲೋಮೀಟರ್ ದೂರವನ್ನು 60 ನಿಮಿಷಗಳಲ್ಲಿ ಓಡಬೇಕಾದ ಅರ್ಹತಾ ಮಾನದಂಡವನ್ನು ಸಡಿಲಿಸಿಸಿ 1.6 ಕಿಲೋಮೀಟರ್ ದೂರವನ್ನು 5-6 ನಿಮಿಷಗಳಲ್ಲಿ ಓಡಬೇಕು ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸುವ ತೀರ್ಮಾನಕ್ಕೆ ಬಂದಿದೆ. ಅಥವಾ 5 ಕಿಲೋಮೀಟರ್ ದೂರವನ್ನು 25 ನಿಮಿಷಗಳಲ್ಲಿ ಕ್ರಮಿಸಬೇಕು ಎಂಬ ಹೊಸ ಮಾನದಂಡ ಜಾರಿಗೊಳಿಸಲಿದೆ.
ಜಾರ್ಖಂಡ್ ಪೊಲೀಸ್ ಇಲಾಖೆಯ ಡಿಐಜಿ ಶ್ರೇಣಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕಕೊಂಡಿದ್ದು, ಈ ಎರಡೂ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದ್ದು, ತಾರ್ತಿಕ ಮಾನದಂಡವನ್ನು ಅನುಮೋದಿಸಲಿದೆ ಎಂದು ಹೇಳಿದ್ದಾರೆ.
ಈ ಬದಲಾವಣೆಗಳು ಎಲ್ಲ ಭವಿಷ್ಯದ ಪರೀಕ್ಷೆ/ ನೇಮಕಾತಿ ಅಭಿಯಾನಗಳಿಗೆ ಅನ್ವಯವಾಗಲಿವೆ. ಈಗಾಗಲೇ ಶೇಕಡ 80ರಷ್ಟು ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ಮುಗಿದಿರುವುದರಿಂದ, ಈಗ ಇರುವ ಮಾನದಂಡದ ಅನ್ವಯ ಉಳಿದ ಶೇಕಡ 20ರಷ್ಟು ಮಂದಿ ಪರೀಕ್ಷೆ ಎದುರಿಸಬೇಕಾಗುತ್ತದೆ.
ಭಾರತೀಯ ಸೇನೆಯ ಮಾನದಂಡದಂತೆ ಪುರುಷರು 1.6 ಕಿಲೋಮೀಟರ್ ದೂರವನ್ನು 5.45 ನಿಮಿಷಗಳಲ್ಲಿ ಕ್ರಮಿಸಬೇಕು ಮತ್ತು ಮಹಿಳೆಯರು 7.30 ನಿಮಿಷಗಳಲ್ಲಿ ಈ ಅಂತರ ಕ್ರಮಿಸಬೇಕು. ಕೇಂದ್ರೀಯ ಅರೆಮಿಲಿಟರಿ ಪಡೆಗಳ ಮಾನದಂಡದಂತೆ ಪುರುಷರು 5 ಕಿಲೋಮೀಟರ್ ದೂರವನ್ನು 24 ನಿಮಿಷಗಳಲ್ಲಿ ಮತ್ತು ಮಹಿಳೆಯರು 1.6 ಕಿಲೋಮೀಟರ್ ದೂರವನ್ನು 8.30 ನಿಮಿಷಗಳಲ್ಲಿ ಓಡಬೇಕು.
ಇತರ ರಾಜ್ಯಗಳ ಪೊಲೀಸ್ ಪಡೆಗಿಂತ ಹಾಗೂ ಸೇನೆಗಿಂತಲೂ ಕಟ್ಟುನಿಟ್ಟಿನ ಮಾನದಂಡಗಳನ್ನು ನಿಗದಿಪಡಿಸಲಾಗಿದೆ ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು, ಈ ಮಾನದಂಡಗಳು ಅಪಾಯಕಾರಿಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲು ಆದೇಶಿಸಿದ್ದಾರೆ.