EBM News Kannada
Leading News Portal in Kannada

ಆಸ್ಪತ್ರೆಯಲ್ಲಿ ಭದ್ರತಾ ಕ್ರಮಗಳ ಅನುಷ್ಠಾನ | ಸೆ. 10ರ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ

0


ಹೊಸದಿಲ್ಲಿ : ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸುರಕ್ಷೆಗೆ ಸುರಕ್ಷಾ ಕ್ರಮಗಳ ಅನುಷ್ಠಾನದ ಕುರಿತು ಸೆಪ್ಟಂಬರ್ 10ರ ಒಳಗೆ ಕ್ರಮ ಜಾರಿ ವರದಿ ಸಲ್ಲಿಸುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ನಿರ್ದೇಶನ ನೀಡಿದ್ದಾರೆ.

ದೇಶಾದ್ಯಂತದ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷೆಯ ಖಾತರಿ ನೀಡಲು ಕೂಡಲೇ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಕುರಿತು ಒತ್ತಿ ಹೇಳಿದ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ಆದೇಶದ ಹಿನ್ನೆಲೆಯಲ್ಲಿ ಅವರು ಈ ನಿರ್ದೇಶನಗಳನ್ನು ನೀಡಿದ್ದಾರೆ.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿಪಿಗಳಿಗೆ ಬರೆದ ಪತ್ರದಲ್ಲಿ ಅಪೂರ್ವ ಚಂದ್ರ, ಈ ಗಂಭೀರ ವಿಷಯದ ಕುರಿತು ಇತ್ತೀಚೆಗೆ ನಡೆದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಅವರ ಪಾಲ್ಗೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಆಗಸ್ಟ್ 28ರಂದು ನಡೆದ ಈ ಸಮಾವೇಶದಲ್ಲಿ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷಿತ ಕೆಲಸದ ವಾತಾವರಣ ಒದಗಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ, ಹತ್ಯೆ ಘಟನೆ ಸೇರಿದಂತೆ ಇತ್ತೀಚೆಗಿನ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿತ್ತು.

ಅತಿ ಅಪಾಯದ ಸಂಸ್ಥೆಗಳನ್ನು ಗುರುತಿಸುವುದು, ಭದ್ರತಾ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಹಾಗೂ ಹಿನ್ನೆಲೆ ಪರಿಶೀಲನೆ ಸೇರಿದಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆದ್ಯತೆ ನೀಡಬೇಕಾದ ಹಲವು ಪ್ರಮುಖ ಕ್ರಮಗಳನ್ನು ಅಪೂರ್ವ ಚಂದ್ರ ವಿವರಿಸಿದ್ದಾರೆ.

ಅತ್ಯಧಿಕ ರೋಗಿಗಳು ಪ್ರವೇಶಿಸುವ ಆಸ್ಪತ್ರೆಗಳನ್ನು ಗುರುತಿಸುವಂತೆ ಹಾಗೂ ಭದ್ರತೆ ಹೆಚ್ಚಿಸಲು ಅತ್ಯಧಿಕ ಆದ್ಯತೆಯ ಸಂಸ್ಥೆ ಎಂದು ವರ್ಗೀಕರಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಅವರು ಆಗ್ರಹಿಸಿದ್ದಾರೆ. ಆಸ್ಪತ್ರೆಗಳಲ್ಲಿ ಈಗಿರುವ ಭದ್ರತಾ ಕ್ರಮಗಳನ್ನು ಅಂದಾಜಿಸಲು ಹಾಗೂ ಸುಧಾರಿಸಲು ನಿರಂತರ ಭದ್ರತಾ ಪರಿಶೀಲನೆ, ಸ್ಥಳೀಯ ಆರೋಗ್ಯಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ಅಪೂರ್ವ ಚಂದ್ರ ಶಿಫಾರಸು ಮಾಡಿದ್ದಾರೆ.

Leave A Reply

Your email address will not be published.