EBM News Kannada
Leading News Portal in Kannada

ಲೋಕಸಭಾ ಚುನಾವಣೆ: ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

0


ವಾರಣಾಸಿ/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಅವರು ಈ ಕ್ಷೇತ್ರದಿಂದ ಸತತ ಮೂರನೆಯ ಬಾರಿಗೆ ಆಯ್ಕೆ ಬಯಸಿದ್ದಾರೆ. ಇದಕ್ಕೂ ಮುನ್ನ, ನಿನ್ನೆ (ಸೋಮವಾರ) ವಾರಣಾಸಿಯಲ್ಲಿ 6 ಕಿಮೀ ದೂರ ರೋಡ್ ಶೋ ನಡೆಸಿದ್ದ ಪ್ರಧಾನಿ ಮೋದಿ, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು.

ಅಸ್ಸಿ ಘಾಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಇಂದಿನ ದಿನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ, ಅಲ್ಲಿ ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಕಾಳ ಭೈರವ ದೇವಾಲಯಕ್ಕೆ ಭೇಟಿ ನೀಡಿದ ಮೋದಿ, ಸುಮಾರು 12 ಗಂಟೆಯ ವೇಳೆಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದಾದ ನಂತರ ರುದ್ರಾಕ್ಷ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು, ಮಧ್ಯಾಹ್ನ 1 ಗಂಟೆಯ ನಂತರ ವಾರಣಾಸಿಯಿಂದ ನಿರ್ಗಮಿಸಲಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ನಾನು ಭಾವುಕನಾಗಿದ್ದೇನೆ! ನಿಮ್ಮ ಪ್ರೀತಿಯ ನೆರಳಿನಲ್ಲಿ 10 ವರ್ಷ ಹೇಗೆ ಕಳೆದು ಹೋಯಿತು ಎಂಬುದೂ ನನಗೆ ತಿಳಿದಿಲ್ಲ. ಗಂಗಾ ಮಾತೆ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಈ ಹಿಂದೆ ಹೇಳಿದ್ದೆ. ಇಂದು ಗಂಗಾ ಮಾತೆಯು ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ” ಎಂದು ಬರೆದುಕೊಂಡಿದ್ದಾರೆ.

2014ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಡುವಿನ ಐತಿಹಾಸಿಕ ಹಣಾಹಣಿಗೆ ವಾರಣಾಸಿ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿತ್ತು. ಆ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಿದ್ದ ಮೋದಿ, ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಪರಿವರ್ತಿಸಿದ್ದರು.



Leave A Reply

Your email address will not be published.