ಚಂಡಿಗಢ : ಪಂಜಾಬ್ ಹಾಗೂ ಹರ್ಯಾಣ ನಡುವಿನ ಶಂಭು ಹಾಗೂ ಖನೌರಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ‘ದಿಲ್ಲಿ ಚಲೋ’ ಪ್ರತಿಭಟನೆಯಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ಪಾಸ್ಪೋರ್ಟ್ ಹಾಗೂ ವಿಸಾ ರದ್ದುಗೊಳಿಸುವ ಪ್ರಕ್ರಿಯೆಯನ್ನು ಹರ್ಯಾಣ ಪೊಲೀಸರು ಆರಂಭಿಸಿದ್ದಾರೆ.
ಪಂಜಾಬಿನ ರೈತರು ದಿಲ್ಲಿಗೆ ತಮ್ಮ ಪ್ರತಿಭಟನಾ ರ‍್ಯಾಲಿಯನ್ನು ಪುನರಾರಂಭಿಸಬೇಕೇ ಎಂದು ಚಿಂತಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ರೈತರ ಪ್ರತಿಭಟನೆ ಹೆಸರಿನಲ್ಲಿ ಪಂಜಾಬಿನಿಂದ ಹರ್ಯಾಣಕ್ಕೆ ಬಂದು ಹಿಂಸಾಚಾರದಲ್ಲಿ ತೊಡಗಿದವರನ್ನು ಗುರುತಿಸಲಾಗಿದೆ ಎಂದು ಅಂಬಾಲದ ಡಿಎಸ್ಪಿ ಜೋಗಿಂದರ್ ಶರ್ಮಾ ತಿಳಿಸಿದ್ದಾರೆ.
ನಾವು ಅವರನ್ನು ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಗುರುತಿಸಿದ್ದೇವೆ. ಅವರ ವಿಸಾ ಹಾಗೂ ಪಾಸ್ಪೋರ್ಟ್ ಗಳನ್ನು ರದ್ದುಗೊಳಿಸುವಂತೆ ನಾವು ಸಚಿವಾಲಯ ಹಾಗೂ ರಾಯಬಾರಿ ಕಚೇರಿಗೆ ಮನವಿ ಮಾಡಲಿದ್ದೇವೆ. ಅವರ ಫೋಟೊ, ಹೆಸರು ಹಾಗೂ ವಿಳಾಸವನ್ನು ಪಾಸ್ಪೋರ್ಟ್ ಕಚೇರಿಗೆ ನೀಡಲಿದ್ದೇವೆ. ನಾವು ಅವರ ಪಾಸ್ಪೋರ್ಟ್ ರದ್ದುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ‘ದಿಲ್ಲಿ ಚಲೋ’ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದೆ.